ADVERTISEMENT

ಹಫೀಜ್ ಸಯೀದ್, ನಾಲ್ವರು ಸಹಚರರ ಬ್ಯಾಂಕ್‌ ಖಾತೆಗಳನ್ನು ಮರುಸ್ಥಾಪಿಸಿದ ಪಾಕಿಸ್ತಾನ

ಪಿಟಿಐ
Published 13 ಜುಲೈ 2020, 1:43 IST
Last Updated 13 ಜುಲೈ 2020, 1:43 IST
ಹಫೀಜ್ ಸಯೀದ್
ಹಫೀಜ್ ಸಯೀದ್   

ಇಸ್ಲಾಮಾಬಾದ್: 2008ರ ಮುಂಬೈ ದಾಳಿಯ ಸಂಚುಕೋರ, ಜಮಾತ್ ಉದ್ ದಾವಾ (ಜೆಯುಡಿ) ಮುಖ್ಯಸ್ಥ ಹಫೀಜ್ ಸಯೀದ್‌ ಮತ್ತು ಅವನ ನಾಲ್ವರು ಸಹಚರರ ಬ್ಯಾಂಕ್ ಖಾತೆಗಳನ್ನು ಪಾಕಿಸ್ತಾನ ಮರುಸ್ಥಾಪಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ವಿಶ್ವಸಂಸ್ಥೆಯೂ ಭಯೋತ್ಪಾದಕನೆಂದು ಘೋಷಿಸಿರುವ ಹಫೀಜ್‌ನನ್ನು ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ಒದಗಿಸುತ್ತಿರುವ ಆರೋಪದಲ್ಲಿ ಕಳೆದ ವರ್ಷ ಜುಲೈ 17ರಂದು ಬಂಧಿಸಲಾಗಿತ್ತು. ಎರಡು ಪ್ರಕರಣಗಳಲ್ಲಿ ಹಫೀಜ್‌ನನ್ನು ತಪ್ಪಿತಸ್ಥ ಎಂದು ಪರಿಗಣಿಸಿದ್ದ ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ ನ್ಯಾಯಾಲಯ ಇದೇ ವರ್ಷ ಫೆಬ್ರುವರಿಯಲ್ಲಿ ಆತನಿಗೆ 11 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಬಳಿಕ ಆತನನ್ನು ಲಾಹೋರ್‌ನ ಕೋಟ್ ಲಖಪತ್ ಜೈಲಿನಲ್ಲಿರಿಸಲಾಗಿದೆ.

ಅಬ್ದುಲ್ ಸಲಾಂ ಭುಟ್ಟಾವಿ, ಹಾಜಿ ಎಂ ಅಶ್ರಫ್, ಯಾಹ್ಯಾ ಮುಜಾಹಿದ್ ಮತ್ತು ಜಾಫರ್ ಇಕ್ಬಾಲ್ (ಜಾಗತಿಕ ಉಗ್ರರ ಪಟ್ಟಿಯಲ್ಲಿ ಹೆಸರಿಸಲಾಗಿರುವವರು) ಬ್ಯಾಂಕ್ ಖಾತೆಗಳನ್ನೂ ಮರುಸ್ಥಾಪಿಸಲಾಗಿದೆ. ಈ ಉಗ್ರರು ಜೆಯುಡಿ ಮತ್ತು ಲಷ್ಕರ್ ಎ ತಯ್ಬಾ ಉಗ್ರ ಸಂಘಟನೆಗೆ ಸೇರಿದವರು ಎಂದು ವರದಿ ಉಲ್ಲೇಖಿಸಿದೆ.

ADVERTISEMENT

ಈ ಉಗ್ರರು ಸದ್ಯ 1–5 ವರ್ಷ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವವರಾಗಿದ್ದು, ಲಾಹೋರ್‌ನ ಜೈಲಿನಲ್ಲಿದ್ದಾರೆ. ಇವರ ವಿರುದ್ಧ ಪಂಜಾಬ್‌ನ ಭಯೋತ್ಪಾದನೆ ನಿಗ್ರಹ ಇಲಾಖೆ ಉಗ್ರರಿಗೆ ಹಣಕಾಸು ನೆರವು ನೀಡಿದ ಪ್ರಕರಣ ದಾಖಲಿಸಿತ್ತು.

‘ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಬಂಧ ಸಮಿತಿಯ ಅನುಮತಿಯ ಬಳಿಕವೇ ಬ್ಯಾಂಕ್ ಖಾತೆಗಳನ್ನು ಮರುಸ್ಥಾಪಿಸಲಾಗಿದೆ’ ಎಂದೂ ವರದಿ ಉಲ್ಲೇಖಿಸಿದೆ.

ಕುಟುಂಬದ ಹಣಕಾಸು ಅಗತ್ಯಗಳ ನಿರ್ವಹಣೆಗಾಗಿ ಬ್ಯಾಂಕ್ ಖಾತೆಗಳ ಮರುಸ್ಥಾಪನೆಗೆ ಅನುಮತಿ ನೀಡಬೇಕೆಂದು ಈ ಉಗ್ರರು ವಿಶ್ವಸಂಸ್ಥೆಗೆ ಮನವಿ ಮಾಡಿದ್ದರು ಎನ್ನಲಾಗಿದೆ.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.