ADVERTISEMENT

ತಾಲಿಬಾನ್‌ ಆಡಳಿತದಿಂದ ಗಡಿಪ್ರದೇಶ ಅತಿಕ್ರಮಣ: ಪಾಕಿಸ್ತಾನ ಆರೋಪ

ರಾಯಿಟರ್ಸ್
Published 11 ಸೆಪ್ಟೆಂಬರ್ 2023, 9:56 IST
Last Updated 11 ಸೆಪ್ಟೆಂಬರ್ 2023, 9:56 IST
<div class="paragraphs"><p>ಆಫ್ಗಾನಿಸ್ತಾನ ಕಡೆ ಹೊರಟ ಸರಕು ಹೊತ್ತ ಟ್ರಕ್‌ಗಳು ಪಾಕಿಸ್ತಾನದ ಮಿಚಿನ್ ತಪಾಸಣಾ ಕೇಂದ್ರದ ಬಳಿ ಸಾಲುಗಟ್ಟಿ ನಿಂತಿರುವ ದೃಶ್ಯ</p></div>

ಆಫ್ಗಾನಿಸ್ತಾನ ಕಡೆ ಹೊರಟ ಸರಕು ಹೊತ್ತ ಟ್ರಕ್‌ಗಳು ಪಾಕಿಸ್ತಾನದ ಮಿಚಿನ್ ತಪಾಸಣಾ ಕೇಂದ್ರದ ಬಳಿ ಸಾಲುಗಟ್ಟಿ ನಿಂತಿರುವ ದೃಶ್ಯ

   

ರಾಯಿಟರ್ಸ್ ಚಿತ್ರ

ಇಸ್ಲಾಮಾಬಾದ್: ‘ಪಾಕಿಸ್ತಾನದ ಗಡಿ ಪ್ರದೇಶವನ್ನು ತಾಲಿಬಾನ್ ಆಡಳಿತವು ಆಕ್ರಮಿಸುತ್ತಿದ್ದು, ಕಾನೂನು ಬಾಹಿರವಾಗಿ ಕೆಲ ಕಟ್ಟಡಗಳನ್ನು ನಿರ್ಮಿಸುತ್ತಿದೆ. ಜತೆಗೆ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ’ ಎಂದು ಪಾಕಿಸ್ತಾನ ಆರೋಪಿಸಿದೆ.

ADVERTISEMENT

ಪಾಕಿಸ್ತಾನ ಹಾಗೂ ಆಫ್ಗಾನಿಸ್ತಾನ ನಡುವಿನ ತೋರ್ಖಂ ಗಡಿ ಪ್ರದೇಶದ ಬಳಿ ಕಳೆದ ಒಂದು ವಾರದಿಂದ ಈ ಪರಿಸ್ಥಿತಿ ಇದ್ದು, ಬುಧವಾರದಿಂದ ಈ ಪ್ರದೇಶವನ್ನು ಮುಚ್ಚಲಾಗಿದೆ. ಇದರಿಂದಾಗಿ ಗಡಿ ಪ್ರದೇಶದಲ್ಲಿ ಸರಕು ಹೊತ್ತ ನೂರಾರು ಲಾರುಗಳು ನಿಂತಿವೆ. ಸಾವಿರಾರು ಸಂಖ್ಯೆಯ ಪ್ರವಾಸಿಗರು ಮುಂದೆ ಸಾಗಲಾಗದೆ ಗಡಿ ಪ್ರದೇಶದಲ್ಲೇ ಇದ್ದಾರೆ.

ಮತ್ತೊಂದೆಡೆ ಗಡಿ ಭಾಗವನ್ನು ಮುಚ್ಚಿರುವ ಪಾಕಿಸ್ತಾನದ ಕ್ರಮಕ್ಕೆ ತಾಲಿಬಾನ್ ವಿದೇಶಾಂಗ ಸಚಿವ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗಡಿ ಪ್ರದೇಶದಲ್ಲಿರುವ ಹಳೆಯ ಭದ್ರತಾ ಚೌಕಿಯನ್ನು ದುರಸ್ತಿ ಮಾಡುತ್ತಿದ್ದ ಸಂದರ್ಭದಲ್ಲಿ ಪಾಕಿಸ್ತಾನ ಭದ್ರತಾ ಪಡೆ ತಾಲಿಬಾನ್ ಪಡೆಯ ಮೇಲೆ ಗುಂಡಿನ ದಾಳಿ ನಡೆಸಿದೆ ಎಂದೂ ಆರೋಪಿಸಿದ್ದಾರೆ.

ಪಾಕಿಸ್ತಾನ ವಿದೇಶಾಂಗ ಸಚಿವೆ ಮುಮ್ತಾಜ್ ಜಹಾರಾ ಬಲೋಚ್ ಅವರು ಪ್ರತಿಕ್ರಿಯಿಸಿ, ‘ಪಾಕಿಸ್ತಾನದ ಗಡಿಯಲ್ಲಿ ಕಟ್ಟಡವೊಂದರ ನಿರ್ಮಾಣವನ್ನು ತಾಲಿಬಾನ್‌ ಆಡಳಿತದ ಆಫ್ಗನ್ ಸರ್ಕಾರ ಕೈಗೊಂಡಿರುವುದೇ ಈ ಸಂಘರ್ಷಕ್ಕೆ ಕಾರಣ. ಆಫ್ಗಾನಿಸ್ತಾನದ ಈ ನಡೆ ಪಾಕಿಸ್ತಾನದ ಸಾರ್ವಭೌಮತ್ವಕ್ಕೆ ಆದ ಧಕ್ಕೆಯಾಗಿದೆ’ ಎಂದು ಆರೋಪಿಸಿದ್ದಾರೆ.

‘ಆಫ್ಗನ್ ಪಡೆಯು ಪಾಕಿಸ್ತಾನದ ಸೈನಿಕರ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಪಾಕಿಸ್ತಾನದ ಸೇನಾ ನೆಲೆಯನ್ನೇ ಗುರಿಯಾಗಿಸಿಕೊಂಡು ಇದು ನಡೆದಿದೆ. ಇದರಿಂದ ಗಡಿ ಪ್ರದೇಶದಲ್ಲಿನ ಮೂಲಸೌಕರ್ಯಕ್ಕೆ ಹಾನಿಯಾಗಿದೆ. ಗಡಿ ಪ್ರದೇಶದಲ್ಲಿ ವಾಸಿಸುವ ಉಭಯ ದೇಶಗಳ ನಿವಾಸಿಗಳಿಗೂ ತೊಂದರೆಯಾಗಿದೆ’ ಎಂದಿದ್ದಾರೆ.

ದಶಕಗಳಿಂದ ಉಭಯ ದೇಶದ ನಡುವಿನ 2,600 ಕಿ.ಮೀ. ಉದ್ದದ ಗಡಿ ಕುರಿತಂತೆ ವಿವಾದ ಇದೆ. ಗಡಿ ಪ್ರದೇಶದಲ್ಲಿ ಭಯೋತ್ಪಾದಕರ ನುಸುಳುವಿಕೆ ಮತ್ತು ದಾಳಿ ಹೆಚ್ಚಾಗಿದ್ದು ಇದನ್ನು ತಾಲಿಬಾನ್ ಅಧಿಕಾರಿಗಳು ನಿಯಂತ್ರಿಸಬೇಕು ಎಂದು ಪಾಕಿಸ್ತಾನ ಆಗ್ರಹಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.