ADVERTISEMENT

ಪಾಕ್‌ ಚುನಾವಣೆಯಲ್ಲಿ ಅಕ್ರಮ ಆರೋಪ; ಜಂಟಿ ತನಿಖಾ ತಂಡ ರಚಿಸಿದ ಉಸ್ತುವಾರಿ ಸರ್ಕಾರ 

ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ ಮಾಡಿದ್ದ ಪ್ರಕರಣ

ಪಿಟಿಐ
Published 22 ಫೆಬ್ರುವರಿ 2024, 13:56 IST
Last Updated 22 ಫೆಬ್ರುವರಿ 2024, 13:56 IST
<div class="paragraphs"><p>ಪಾಕಿಸ್ತಾನ&nbsp;ಚುನಾವಣೆ</p></div>

ಪಾಕಿಸ್ತಾನ ಚುನಾವಣೆ

   

ಇಸ್ಲಾಮಾಬಾದ್‌: ಚುನಾವಣಾ ಅಕ್ರಮದಲ್ಲಿ ಚುನಾವಣಾ ಆಯೋಗದ ಪ್ರಮುಖರು ಮತ್ತು ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ನಡೆಸಿರುವ ಸಂಬಂಧ ತನಿಖೆ ನಡೆಸಲು ಪಾಕಿಸ್ತಾನದ ಉಸ್ತುವಾರಿ ಸರ್ಕಾರವು ಐಎಸ್‌ಐ ಸೇರಿದಂತೆ ಜಂಟಿ ತನಿಖಾ ತಂಡವನ್ನು ರಚಿಸಿದೆ ಎಂದು ಗುರುವಾರ ಮಾಧ್ಯಮ ವರದಿಗಳು ತಿಳಿಸಿವೆ.

ಜಂಟಿ ತನಿಖಾ ತಂಡದಲ್ಲಿ (ಜೆಐಟಿ) ಪಾಕಿಸ್ತಾನದ ಗುಪ್ತಚರ ಸಂಸ್ಥೆ (ಐಎಸ್‌ಐ) ಜತೆಗೆ ಇಂಟೆಲಿಜೆನ್ಸ್‌ ಬ್ಯೂರೊ (ಐಬಿ), ರಾಷ್ಟ್ರೀಯ ದತ್ತಾಂಶ ಮತ್ತು ನೋಂದಣಿ ಪ್ರಾಧಿಕಾರ (ಎನ್‌ಎಡಿಆರ್‌ಎ), ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರ(ಪಿಟಿಎ) ಸೇರಿಸಲಾಗಿದೆ. ಅಗತ್ಯವಿದ್ದರೆ ಐ.ಟಿ ತಜ್ಞರನ್ನು ಸಹ ನೇಮಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಜೆಐಟಿಯು 15 ದಿನಗಳೊಳಗೆ ವರದಿ ಸಲ್ಲಿಸಬೇಕೆಂದು ಉಸ್ತುವಾರಿ ಸರ್ಕಾರ ಸೂಚಿಸಿದೆ.

ADVERTISEMENT

ಸರ್ಕಾರಿ ಅಧಿಕಾರಿಗಳು ಮತ್ತು ಚುನಾವಣಾ ಆಯೋಗದ (ಇಸಿಪಿ) ಅಧಿಕಾರಿಗಳನ್ನು ಟ್ರೋಲ್ ಮಾಡಿದ ಅಪರಾಧಿಗಳನ್ನು ಜೆಐಟಿಯು  ಗುರುತಿಸಿ, ಅವರ ಮೇಲೆ ಸೂಕ್ತ ಕಾನೂನು ಕ್ರಮವನ್ನು ಜರುಗಿಸಲಿದೆ. 

ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷವು, ಚುನಾವಣಾ ಅಕ್ರಮದಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಚುನಾವಣಾ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ನಿರಂತರ ಆರೋಪಗಳನ್ನು ಹೊರಿಸಿದ ಹಿನ್ನೆಲೆಯಲ್ಲಿ ಜೆಐಟಿ ರಚನೆಯಾಗಿದೆ. 

ಅಧಿಕಾರಿಯ ಗಂಭೀರ ಆರೋಪ:

ರಾವಲ್ಪಿಂಡಿಯ ಗ್ಯಾರಿಸನ್ ಸಿಟಿಯಲ್ಲಿ ಚುನಾವಣಾ ಅಕ್ರಮ ನಡೆದಿದೆ ಎಂದು ಸರ್ಕಾರಿ ಹಿರಿಯ ಅಧಿಕಾರಿಯೊಬ್ಬರು ಮಾಡಿದ ಗಂಭೀರ ಆರೋಪದ ಬಗ್ಗೆ ಪಾಕಿಸ್ತಾನದ ಚುನಾವಣಾ ಆಯೋಗದ ಉನ್ನತ ಮಟ್ಟದ ಸಮಿತಿಯು ತನ್ನ ತನಿಖೆ ಪೂರ್ಣಗೊಳಿಸಿದೆ. ತನ್ನ ವರದಿಯನ್ನು  ಆಯೋಗಕ್ಕೆ ಸಲ್ಲಿಸಲಿದೆ ಎಂದು ‘ಡಾನ್‌’ ಪತ್ರಿಕೆ ಗುರುವಾರ ವರದಿ ಮಾಡಿದೆ.

ಇಮ್ರಾನ್ ಖಾನ್ ಅವರ ಪಕ್ಷದ ವಿರುದ್ಧ ನ್ಯಾಯಾಂಗ ಮತ್ತು ಚುನಾವಣಾ ಆಯೋಗದ ನೆರವಿನಿಂದ ವ್ಯಾಪಕ ಅಕ್ರಮ ನಡೆದಿದೆ. ಫೆ.8ರ ಚುನಾವಣೆಯಲ್ಲಿ ಪರಾಜಿತರಾಗಿದ್ದ ರಾವಲ್ಪಿಂಡಿಯ 13 ಅಭ್ಯರ್ಥಿಗಳನ್ನು ವಿಜೇತರೆಂದು ಘೋಷಿಸಲಾಗಿದೆ ಎಂದು ರಾವಲ್ಪಿಂಡಿಯ ಆಯುಕ್ತ ಲಿಯಾಖತ್ ಅಲಿ ಚಟ್ಟಾ ರಾಜೀನಾಮೆ ನೀಡುವ ಮುನ್ನ ಸ್ಫೋಟಕ ಆರೋಪ ಮಾಡಿದ್ದರು.

ಈ ಬಗ್ಗೆ ತನಿಖೆಗೆ ಪಾಕಿಸ್ತಾನದ ಚುನಾವಣಾ ಆಯೋಗ (ಇಸಿಪಿ) ಭಾನುವಾರ ಸಮಿತಿ ರಚಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.