ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಗುರುವಾರ ಮೊಬೈಲ್, ಇಂಟರ್‌ನೆಟ್ ಸಂಪರ್ಕ ಸ್ಥಗಿತ, ಕೆಲವು ಕಡೆ ಅಹಿತಕರ ಘಟನೆಗಳ ನಡುವೆ ರಾಷ್ಟ್ರೀಯ ಅಸೆಂಬ್ಲಿಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜನರು ಮತ ಚಲಾಯಿಸಿದ್ದಾರೆ.
ನವಾಜ್ ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆಯಿದೆ.
ಬಿಗಿ ಭದ್ರತೆಯ ನಡುವೆ ಬೆಳಿಗ್ಗೆ 8 ಗಂಟೆಗೆ ಆರಂಭವಾದ ಮತದಾನ ಸಂಜೆ 5 ಗಂಟೆಯವರೆಗೆ ಬಿಡುವಿಲ್ಲದೆ ನಡೆಯಿತು. ಸುಮಾರು 12.85 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲು ದೇಶದಾದ್ಯಂತ ಸಾರ್ವಜನಿಕ ರಜಾದಿನ ಘೋಷಿಸಲಾಗಿತ್ತು. ಮತದಾನ ಮುಗಿದ ನಂತರ ಸಂಜೆಯೇ ಎಣಿಕೆ ಆರಂಭವಾಯಿತು. ಶುಕ್ರವಾರ ಬೆಳಿಗ್ಗೆಯೊಳಗೆ ಸಂಪೂರ್ಣ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ.
ತನ್ನ ಪ್ರತಿಸ್ಪರ್ಧಿ ಇಮ್ರಾನ್ ಖಾನ್ ಪಕ್ಷದ ವಿರುದ್ಧದ ದಮನ, ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದಕ ದಾಳಿಗಳ ನಡುವೆಯೂ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ಸೇನೆಯ ಬೆಂಬಲದೊಂದಿಗೆ ದಾಖಲೆಯ ನಾಲ್ಕನೇ ಅವಧಿಗೆ ಅಧಿಕಾರ ಹಿಡಿಯುವ ವಿಶ್ವಾಸದಲ್ಲಿದ್ದಾರೆ.
265 ಸ್ಥಾನಗಳಿಗೆ ಚುನಾವಣೆ: ಪಾಕಿಸ್ತಾನ ಚುನಾವಣಾ ಆಯೋಗದ (ಇಸಿಪಿ) ಪ್ರಕಾರ, ರಾಷ್ಟ್ರೀಯ ಅಸೆಂಬ್ಲಿಯ 266 ಸ್ಥಾನಗಳ ಪೈಕಿ 265 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 5,121 ಅಭ್ಯರ್ಥಿಗಳು ಮತ್ತು ನಾಲ್ಕು ಪ್ರಾಂತೀಯ ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ 12,695 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ನಾಲ್ವರು ಪೊಲೀಸರ ಸಾವು: ಗುರುವಾರ ಡೇರಾ ಇಸ್ಮಾಯಿಲ್ ಖಾನ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ನಾಲ್ವರು ಪೊಲೀಸರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನದ ವಾಯವ್ಯ ಖೈಬರ್ ಪಖ್ತುಂಖ್ವಾ ಪ್ರದೇಶದ ಟ್ಯಾಂಕ್ ಪ್ರದೇಶದಲ್ಲಿ ಸೈನಿಕರ ಮೇಲೆ ಬಂದೂಕುಧಾರಿಗಳು ಗುಂಡು ಹಾರಿಸಿದ್ದರಿಂದ ಭದ್ರತಾ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ.
ಖೈಬರ್-ಪಖ್ತುಂಖ್ವಾದ ಉತ್ತರ ವಜಿರಿಸ್ತಾನದ ಜಿಲ್ಲೆಯ ಮೀರ್ ಅಲಿ ಪ್ರದೇಶದಲ್ಲಿ ಭದ್ರತಾ ಪಡೆಗಳ ವಾಹನದ ಮೇಲೆ ಅಪರಿಚಿತ ವ್ಯಕ್ತಿಗಳು ರಾಕೆಟ್ ದಾಳಿ ನಡೆಸಿದ್ದಾರೆ.
ಮತದಾನದ ದಿನ ಮೊಬೈಲ್ ಇಂಟರ್‌ನೆಟ್ ಸ್ಥಗಿತಗೊಳಿಸಿರುವುದು ದುಃಖಕರ ಮತ್ತು ಕಳವಳಕಾರಿ. ಈ ನಿರ್ಧಾರ ಚುನಾವಣೆಯ ಪಾರದರ್ಶಕತೆಯ ಮೇಲೆ ಪರಿಣಾಮ ಬೀರಲಿದೆ.–ಪಾಕಿಸ್ತಾನದ ಮಾನವ ಹಕ್ಕುಗಳ ಮಂಡಳಿ
ಪಿಟಿಐ ಮತಗಟ್ಟೆ ಪ್ರತಿನಿಧಿಗಳಿಲ್ಲದೆ ಪಾಕ್‌ನಲ್ಲಿ ಚುನಾವಣೆ
ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಹಲವಾರು ಪ್ರದೇಶಗಳಲ್ಲಿ ತಮ್ಮ ಪಕ್ಷದಿಂದ ಬೂತ್ ಏಜೆಂಟ್‌ಗಳಿಗೆ ಅವಕಾಶ ನೀಡದೆ ಚುನಾವಣೆ ನಡೆಸಲಾಗುತ್ತಿದೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷ ಪಿಟಿಐ (ಪಾಕಿಸ್ತಾನ್ ತೆಹ್ರಿಕ್– ಎ– ಇನ್ಸಾಫ್) ಗುರುವಾರ ಆರೋಪಿಸಿದೆ.
ಚುನಾವಣೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ನಡೆಸಲು ಪಿಟಿಐ ಪಕ್ಷದ ಕೆಲವು ಬೂತ್ ಏಜೆಂಟ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಕ್ಷದ ಮತಗಟ್ಟೆಗಳ ಶಿಬಿರಗಳನ್ನು ತೆರವುಗೊಳಿಸಿದ್ದಾರೆ. ತಮ್ಮ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯಲು ಈ ತಂತ್ರಗಳನ್ನು ಬಳಸಲಾಗಿದೆ ಎಂದು ಪಿಟಿಐ ಆರೋಪಿಸಿದೆ.
ಪಿಟಿಐ ಪಕ್ಷದ ಚಿಹ್ನೆ ಕ್ರಿಕೆಟ್ ಬ್ಯಾಟ್ ಅನ್ನು ಚುನಾವಣಾ ಆಯೋಗ ಕಸಿದುಕೊಂಡ ಕ್ರಮವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದ ನಂತರ ಪಕ್ಷದ ಅಭ್ಯರ್ಥಿಗಳು ಸ್ವತಂತ್ರವಾಗಿ ಕಣಕ್ಕಿಳಿದಿದ್ದರು. ಸದ್ಯ ಅಡಿಯಾಲ ಜೈಲಿನಲ್ಲಿರುವ ಇಮ್ರಾನ್ ಖಾನ್ ಜೈಲಿನಿಂದಲೇ ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಿದರು. ಆದರೆ ಖಾನ್ ಅವರ ಪತ್ನಿ ಬುಶ್ರಾ ಬೀಬಿ ಅವರಿಗೆ ಮತದಾನದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಅವರನ್ನು ಅಪರಾಧಿ ಎಂದು ಘೋಷಿಸಿ ಬಂಧಿಸುವಷ್ಟರಲ್ಲಿ ಅಂಚೆ ಮತದಾನ ಪ್ರಕ್ರಿಯೆ ಮುಗಿದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.