ADVERTISEMENT

ಮತಾಂಧ ದೃಷ್ಟಿಯ ಉಗ್ರರಿಗೆ ಅವಕಾಶವಿಲ್ಲ: ಪಾಕ್‌

ಪಿಟಿಐ
Published 16 ಡಿಸೆಂಬರ್ 2019, 20:21 IST
Last Updated 16 ಡಿಸೆಂಬರ್ 2019, 20:21 IST
ಇಮ್ರಾನ್ ಖಾನ್
ಇಮ್ರಾನ್ ಖಾನ್   

ಪೇಶಾವರ್‌/ಇಸ್ಲಾಮಾಬಾದ್‌: ‘ಮತಾಂಧ ದೃಷ್ಟಿ’ ಹೊಂದಿರುವ ಉಗ್ರರಿಗೆ ದೇಶವನ್ನು ಒತ್ತೆಯಾಗಿಸಿಕೊಳ್ಳಲು ಎಂದೂ ಅವಕಾಶ ನೀಡುವುದಿಲ್ಲ ಎಂದು ಪಾಕಿಸ್ತಾನದ ಉನ್ನತ ನಾಯಕರು ಸೋಮವಾರ ಹೇಳಿದ್ದಾರೆ.

ಪೇಶಾವರದ ಆರ್ಮಿ ಪಬ್ಲಿಕ್‌ ಶಾಲೆಯಲ್ಲಿ 132 ವಿದ್ಯಾರ್ಥಿಗಳು ಸೇರಿದಂತೆ 149 ಮಂದಿಯನ್ನು ಹತ್ಯೆಗೈದ ಘಟನೆಯ 5ನೇ ವರ್ಷದ ಅಂಗವಾಗಿ ದೇಶದಲ್ಲಿ ನಡೆದ ಸ್ಮರಣೆ ಕಾರ್ಯಕ್ರಮದಲ್ಲಿ ಶೋಕ ವ್ಯಕ್ತಪಡಿಸಿದ ನಾಯಕರು, ಉಗ್ರರನ್ನು ಹಿಮ್ಮೆಟ್ಟಿಸುವ ಬಗ್ಗೆ ವಾಗ್ದಾನ ಮಾಡಿದ್ದಾರೆ.

ಅರೆಸೇನಾ ಪಡೆಯ ಸಮವಸ್ತ್ರ ಧರಿಸಿದ್ದ 8 ರಿಂದ 10 ಉಗ್ರರು 2014ರ ಡಿಸೆಂಬರ್‌ 16 ರಂದು ಆರ್ಮಿ ಪಬ್ಲಿಕ್‌ ಶಾಲೆಗೆ ನುಗ್ಗಿ ತರಗತಿಯಿಂದ ತರಗತಿಯವರೆಗೆ ಹೋಗಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರು. 132 ವಿದ್ಯಾರ್ಥಿಗಳು ಸೇರಿದಂತೆ 149 ಜನರು ಮೃತಪಟ್ಟಿದ್ದರು.

ADVERTISEMENT

ಘಟನೆಯ ನಂತರ, ಈ ಹತ್ಯಾಕಾಂಡಕ್ಕೆ ಸಂಬಂಧಪಟ್ಟ ನಾಲ್ವರನ್ನು ಪಾಕಿಸ್ತಾನ ಗಲ್ಲಿಗೇರಿಸಿದೆ ಎಂದು ಬಿಬಿಸಿ ವರದಿ ಮಾಡಿತ್ತು.

‘ಉಗ್ರಗಾಮಿ ಮನಸ್ಥಿತಿಯವರಿಗೆ ದೇಶವನ್ನು ಸ್ವಾಧೀನಪಡಿಸಿಕೊಳ್ಳಲು ಅವಕಾಶ ನೀಡುವುದಿಲ್ಲ. ರಾಷ್ಟ್ರವನ್ನು ತಮ್ಮ ಧರ್ಮಾಂಧ ದೃಷ್ಟಿಕೋನಕ್ಕೆ ಒತ್ತೆಯಾಳು ಮಾಡಿಕೊಳ್ಳಲೂ ಅವಕಾಶ ನೀಡುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತೇನೆ’ ಎಂದು ಪ್ರಧಾನಿ ಇಮ್ರಾನ್‌ ಖಾನ್‌ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

‘ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಹತ್ಯೆಯನ್ನು ದೇಶ ಎಂದಿಗೂ ಮರೆಯುವುದಿಲ್ಲ. ಕಣ್ಣೀರು ಹಾಕದೆ ಈ ದಿನವನ್ನು ಸ್ಮರಿಸುವುದು ಕಷ್ಟ. ಭಯೋತ್ಪಾದನೆ ಮತ್ತು ಉಗ್ರರನ್ನು ಬುಡಸಮೇತ ಕಿತ್ತುಹಾಕಲು ಪ್ರತಿಜ್ಞೆ ಮಾಡುತ್ತೇವೆ’ ಎಂದು ಅಧ್ಯಕ್ಷ ಆರೀಫ್‌ ಅಲ್ವಿ ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.

‘ಈ ಹತ್ಯಾಕಾಂಡವನ್ನು ಎಂದಿಗೂ ಮರೆಯಲು ಆಗುವುದಿಲ್ಲ. ಉಗ್ರರನ್ನು ಹತ್ತಿಕ್ಕುವಲ್ಲಿ ಪಾಕಿಸ್ತಾನ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ಶಾಂತಿ ಮತ್ತು ಸಮೃದ್ಧಿಯತ್ತ ಸಾಗಲು ಪಾಕಿಸ್ತಾನದ ಜನರು ಎಲ್ಲರೂ ಒಗ್ಗಟ್ಟಾಗಿ ಮುನ್ನಡೆದಿದ್ದಾರೆ’ ಎಂದು ಸೇನಾ ಮುಖ್ಯಸ್ಥ ಜನರಲ್‌ ಖಮರ್‌ ಜಾವೇದ್‌ ಬಾಜ್ವಾ ಹೇಳಿದ್ದಾರೆ.

2014 ರಲ್ಲಿ ನಡೆದ ಈ ದಾಳಿಯ ಹೊಣೆಯನ್ನು ಮುಲ್ಲಾ ಫಜಲುಲ್ಲಾ ನೇತೃತ್ವದ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ ವಹಿಸಿಕೊಂಡಿತ್ತು.

ಆರ್ಮಿ ಪಬ್ಲಿಕ್‌ ಶಾಲೆಯ ಮೇಲಿನ ದಾಳಿಯು ಉಗ್ರರ ವಿರುದ್ಧದ ಹೋರಾಟದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಬದಲಾವಣೆ ತಂದಿತು. ಈ ದಾಳಿಯ ನಂತರ ಬುಡಕಟ್ಟು ಪ್ರದೇಶಗಳಲ್ಲಿ ಸೇನಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿ ನಿರ್ಭಯದಿಂದ ಓಡಾಡುತ್ತಿದ್ದ ಉಗ್ರರನ್ನು ಸೆದೆಬಡೆಯಿತು ಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ.

ಶಾಲಾ ಮಕ್ಕಳ ಹತ್ಯೆಯ ಘಟನೆ ಇಡೀ ರಾಷ್ಟ್ರವನ್ನೇ ಬೆಚ್ಚಿಬೀಳಿಸಿತ್ತು. ಇದನ್ನು ಮರೆಯಲು ಸಾಧ್ಯವೇ ಇಲ್ಲ

- ಶಿರೀನ್‌ ಮಜಾರಿ, ಮಾನವ ಹಕ್ಕುಗಳ ಸಚಿವೆ, ಪಾಕಿಸ್ತಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.