ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ 2019ರಿಂದ 2023ರವರೆಗೆ 27 ಲಕ್ಷ ಜನರ ವೈಯಕ್ತಿಕ ಮಾಹಿತಿಯು ಸೋರಿಕೆಯಾಗಿದ್ದು, ಇದು ಗಂಭೀರ ಸ್ವರೂಪದ ಪ್ರಕರಣವಾಗಿದೆ ಎಂದು ಆಂತರಿಕ ಸಚಿವಾಲಯ ಬುಧವಾರ ಹೇಳಿದೆ.
ರಾಷ್ಟ್ರೀಯ ಮಾಹಿತಿ ಹಾಗೂ ನೋಂದಣಿ ಪ್ರಾಧಿಕಾರದಲ್ಲಿದ್ದ ಈ ಮಾಹಿತಿಯ ಸೋರಿಕೆ ಹೇಗಾಯಿತು ಎಂಬುದನ್ನು ಪತ್ತೆ ಮಾಡಲು ಫೆಡರಲ್ ತನಿಖಾ ಸಂಸ್ಥೆಯನ್ನು ಒಳಗೊಂಡಂತೆ ಹಿರಿಯ ಅಧಿಕಾರಿಗಳಿರುವ ಜಂಟಿ ತನಿಖಾ ತಂಡವನ್ನು ರಚಿಸಲಾಗಿತ್ತು. ಇದು ತನ್ನ ವರದಿಯನ್ನು ಸಚಿವಾಲಯಕ್ಕೆ ಸಲ್ಲಿಸಿದೆ. ಇದರಲ್ಲಿ ಸುಮಾರು 27 ಲಕ್ಷ ಪಾಕಿಸ್ತಾನದ ಜನರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ ಎಂದು ಹೇಳಿರುವುದಾಗಿ ಜಿಯೋ ನ್ಯೂಸ್ ವರದಿ ಮಾಡಿದೆ.
ಮುಲ್ತಾನ್, ಕರಾಚಿ, ಪೇಶಾವರದಲ್ಲಿರುವ ಪ್ರಾಧಿಕಾರದ ಕಚೇರಿಗಳು ಈ ಸೋರಿಕೆಯಲ್ಲಿ ಭಾಗಿಯಾಗಿವೆ. ಅಲ್ಲಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಲಾಗಿದೆ. ಈ ಮಾಹಿತಿಯು ಅರ್ಜೆಂಟಿನಾ ಹಾಗೂ ರೊಮಾನಿಯಾಗೆ ಮಾರಾಟವಾಗಿರುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದಕ್ಕೂ ಮೊದಲು ಸೋರಿಕೆಯಾದ ಮಾಹಿತಿಯು ಮುಲ್ತಾನ್‌ನಿಂದ ಪೇಶಾವರಕ್ಕೆ ತಲುಪಿಸಲಾಗಿದೆ. ಅಲ್ಲಿಂದ ದುಬೈಗೆ ತಲುಪಿದೆ. ಅಲ್ಲಿಂದ ಇವುಗಳನ್ನು ಅರ್ಜೆಂಟಿನಾ ಮತ್ತು ರೊಮಾನಿಯಾಗೆ ಮಾರಾಟ ಮಾಡಲಾಗಿದೆ ಎಂದು ಹೇಳಲಾಗಿದೆ.
‘ಮಾಹಿತಿ ಕೋಶದಲ್ಲಿ ಬಳಕೆಯಲ್ಲಿರುವ ತಂತ್ರಜ್ಞಾನವನ್ನು ಇನ್ನಷ್ಟು ಮೇಲ್ದರ್ಜೆಗೆ ಏರಿಸಬೇಕು. ಈ ಕೃತ್ಯದಲ್ಲಿ ಪಾಲ್ಗೊಂಡವರ ವಿರುದ್ಧ ಇಲಾಖಾ ತನಿಖೆ ಹಾಗೂ ಕ್ರಮಿನಲ್ ಪ್ರಕರಣ ದಾಖಲಿಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು’ ಎಂದು ಜಂಟಿ ತನಿಖಾ ತಂಡ ಹೇಳಿದೆ.
2021ರ ನವೆಂಬರ್‌ನಲ್ಲಿ ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಯಲ್ಲಿ ಈ ವಿಷಯ ಚರ್ಚೆಗೊಂಡಿತ್ತು. ಪ್ರಾಧಿಕಾರದ ಭದ್ರತಾ ವೈಫಲ್ಯದಿಂದಾಗಿ ಪಾಕಿಸ್ತಾನದ ಲಕ್ಷಗಟ್ಟಲೆ ಜನರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ ಎಂದು ಹೇಳಲಾಗಿತ್ತು. ಮೊಬೈಲ್ ಸಿಮ್ ವಿತರಿಸಲು ಪಡೆಯಲಾಗಿದ್ದ ಬೆರಳಚ್ಚಿನ ಮಾಹಿತಿ ಇದರಲ್ಲಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.