ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಕೋಟ್ಯಂತರ ಜನರನ್ನು ಅತಂತ್ರರಾಗಿಸಿರುವ ಧಾರಾಕಾರ ಮಳೆ, ಪ್ರವಾಹಕ್ಕೆ ತಾಪಮಾನ ಬದಲಾವಣೆ ಕಾರಣ ಎಂದು ಪರಿಣತರು ಹೇಳಿದ್ದು, ಮುಂದಿನ ದಿನಗಳು ಇನ್ನಷ್ಟು ಗಂಭೀರವಾಗಿರಲಿವೆ ಎಂದಿದ್ದಾರೆ.
ಇದು, ಆರಂಭ ಮಾತ್ರ. ಹವಾಮಾನ ಬದಲಾವಣೆ ಪರಿಣಾಮ ಇನ್ನಷ್ಟು ಗಂಭೀರ, ತೀವ್ರವಾಗಿರಲಿದೆ ಎಂದು ಪರಿಣತರು ಎಚ್ಚರಿಸಿದ್ದಾರೆ. ಭಾರಿ ಮಳೆ, ಪ್ರವಾಹದಿಂದಾಗಿ ಪಾಕಿಸ್ತಾನದಲ್ಲಿ 1,100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, 3.3 ಕೋಟಿ ಜನರು ಅತಂತ್ರರಾಗಿದ್ದಾರೆ.
ಮಳೆಯಿಂದಾಗಿ ಭಾರಿ ಹಾನಿಯಾಗಿದ್ದು, ಪರಿಹಾರ ಕಾರ್ಯಗಳಿಗೆ ತುರ್ತಾಗಿ ಸುಮಾರು 1,250 ಕೋಟಿ ಅಗತ್ಯವಿದ್ದು, ನೆರವು ನೀಡಬೇಕು ಎಂದು ಪಾಕಿಸ್ತಾನ ಸರ್ಕಾರ ಮತ್ತು ವಿಶ್ವಸಂಸ್ಥೆ ಜಂಟಿಯಾಗಿ ವಿಶ್ವ ಸಮುದಾಯಕ್ಕೆ ಮನವಿ ಮಾಡಿವೆ.
ಪ್ರಧಾನಿ ಶೆಹಬಾಝ್ ಷರೀಫ್ ಈಚೆಗೆ ಕೆಲ ರಾಜತಾಂತ್ರಿಕರನ್ನು ಭೇಟಿಯಾಗಿದ್ದು, ಮಳೆ ಹಾನಿ ಕುರಿತ ವಸ್ತುಸ್ಥಿತಿಯನ್ನು ವಿವರಿಸಿದ್ದಾರೆ.
‘ಪಾಕಿಸ್ತಾನ ಮತ್ತು ವಿಶ್ವದ ಕೆಲವೆಡೆ ತಾಪಮಾನ ಬದಲಾವಣೆಯಿಂದ ಆಗುತ್ತಿರುವ ಅನಾಹುತಗಳು ಒಂದು ದುಃಸ್ವಪ್ನ’ ಎಂದು ಕರಾಚಿಯ ಪರಿಸರ ವಿಜ್ಞಾನಿ ಡಾ.ಸೀಮಾ ಜಿಲಾನಿ ಅಭಿಪ್ರಾಯಪಟ್ಟಿದ್ದಾರೆ.
ಕರಾಚಿಯಲ್ಲಿ ನಿರಂತರ ಮಳೆ, ಪ್ರವಾಹವನ್ನು ಹಿಂದೆಂದೂ ನೋಡಿರಲಿಲ್ಲ ಎಂದು ಡಾ.ಅಲಂಗಿರ್ ಹೇಳಿದರು. ಕರಾಚಿಯಲ್ಲಿ ಐದು ವರ್ಷದ ಹಿಂದಷ್ಟೇ ಬಿಸಿ ಗಾಳಿ ಸಮಸ್ಯೆ ಗಂಭೀರವಾಗಿತ್ತು. ಸುಮಾರು 2000 ಮಂದಿ ಸತ್ತಿದ್ದರು ಎಂದು ಸ್ಮರಿಸಿದರು.
ಈ ಮಧ್ಯೆ, ಮಳೆಯ ಪರಿಣಾಮ ದೇಶದ ವಿವಿಧೆಡೆ ಮುಂದುವರಿದಿದೆ. ಸಂತ್ರಸ್ತರ ಸ್ಥಳಾಂತರ, ಪರಿಹಾರ ಕಾರ್ಯಗಳು ಮುಂದುವರಿದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.