ಇಸ್ಲಾಮಾಬಾದ್: ಖೈಬರ್ ಪಖ್ತುಂಖ್ವಾದ ಬನ್ನು ಜಿಲ್ಲೆಯಲ್ಲಿ ಮೂರು ವರ್ಷದ ಬಾಲಕನೊಬ್ಬನಲ್ಲಿ ಪೋಲಿಯೊ ದೃಢಪಟ್ಟಿದೆ. ಇದರ ಪರಿಣಾಮ ಬಾಲಕ ಅಂಗವೈಕಲ್ಯ ತುತ್ತಾಗಿದ್ದಾನೆ. ಇದು 2023ರಲ್ಲಿ ಪಾಕಿಸ್ತಾನದಲ್ಲಿ ಪತ್ತೆಯಾದ ಮೊದಲ ಪೋಲಿಯೊ ಪ್ರಕರಣ ಎಂದು ಡಾನ್ ಪತ್ರಿಕೆ ಶನಿವಾರ ವರದಿ ಮಾಡಿದೆ.
‘ಫ್ರೆಂಚ್ ಏಜೆನ್ಸಿ ಫಾರ್ ಡೆವಲಪ್‌ಮೆಂಟ್ (ಎಫ್‌ಎಡಿ) ಹಾಗೂ ಬಿಲ್ ಅಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್‌ನ (ಬಿಎಂಜಿಎಫ್) ನಿಯೋಗಗಳು ಪೋಲಿಯೊ ನಿರ್ಮೂಲನೆ ಕುರಿತು ಕೈಗೊಂಡ ಕ್ರಮಗಳ ಅಧ್ಯಯನ ನಡೆಸಲು ದೇಶಕ್ಕೆ ಬಂದಾಗ ಈ ಪ್ರಕರಣ ಪತ್ತೆಯಾಗಿದೆ’ ಎಂದು ಡಾನ್ ಪತ್ರಿಕೆಯ ವರದಿ ತಿಳಿಸಿದೆ.
‘ಎಫ್‌ಎಡಿ ಮತ್ತು ಬಿಎಂಜಿಎಫ್ ನಿಯೋಗವು ಪಾಕಿಸ್ತಾನದ ಕೇಂದ್ರ ಆರೋಗ್ಯ ಸಚಿವ ಅಬ್ದುಲ್ ಖಾದಿರ್ ಪಟೇಲ್ ಅವರನ್ನು ಭೇಟಿಯಾಗಿ ಪೋಲಿಯೊ ನಿರ್ಮೂಲನೆಗೆ ಹೆಚ್ಚಿನ ಗಮನ ನೀಡುವ ಮೂಲಕ ಸಾಮಾಜಿಕ ರಕ್ಷಣೆ ಮತ್ತು ಆರೋಗ್ಯದ ವಿಚಾರದಲ್ಲಿ ಸಹಕಾರದ ಮಾರ್ಗಗಳ ಬಗ್ಗೆ ಚರ್ಚಿಸಿದೆ’ ಎಂದು ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.
‘ರೋಗಕ್ಕೆ ತುತ್ತಾಗಿರುವ ಮಗು ಪೋಲಿಯೊ ಲಸಿಕೆ ಪಡೆದಿತ್ತೇ ಅಥವಾ ಆ ಮಗುವಿನ ಪೋಷಕರು ಲಸಿಕೆ ಹಾಕಿಸಲು ನಿರಾಕರಿಸಿದ್ದರೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ರಾಷ್ಟ್ರೀಯ ತುರ್ತು ಕಾರ್ಯಾಚರಣೆ ಕೇಂದ್ರದ (ಪೋಲಿಯೊ) ಡಾ. ಶಾಹ್‌ಜಾದ್ ಬೇಗ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.