ಇಸ್ಲಾಮಾಬಾದ್: ಭ್ರಷ್ಟಾಚಾರ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ತಮ್ಮ ವಿರುದ್ಧ ನೀಡಿರುವ ತೀರ್ಪನ್ನು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಮಂಗಳವಾರ ಪ್ರಶ್ನಿಸಿದ್ದಾರೆ.
‘ನ್ಯಾಯಾಧೀಶರು ಪೂರ್ವಾಗ್ರಹಪೀಡಿತರಾಗಿ ನೀಡಿದ ಈ ತೀರ್ಪು ನ್ಯಾಯದಾನ ವ್ಯವಸ್ಥೆಗೇ ಮಾಡಿದ ಕಪಾಳಮೋಕ್ಷವಾಗಿದೆ. ನ್ಯಾಯಾಂಗದ ವಿಡಂಬನೆಯಾಗಿದೆ. ಕಾನೂನಿಗೆ ವಿರುದ್ಧವಾಗಿದೆ. ತೀರ್ಪನ್ನು ರದ್ದುಗೊಳಿಸಬೇಕು. ಜೈಲಿನಿಂದ ಇಮ್ರಾನ್ ಖಾನ್ ಅವರನ್ನು ಬಿಡುಗಡೆ ಮಾಡಲು ಕೂಡಲೇ ಆದೇಶಿಸಬೇಕು’ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
‘ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಮೊದಲೇ ತೀರ್ಪು ಸಿದ್ಧಪಡಿಸಿದಂತಿದೆ. 35 ಪುಟಗಳ ತೀರ್ಪನ್ನು ಕೇವಲ 30 ನಿಮಿಷದಲ್ಲಿ ಬರೆಯಲಾಗಿದೆ’ ಎಂದೂ ಖಾನ್ ಪರ ವಕೀಲರು ಅರ್ಜಿಯಲ್ಲಿ ಆರೋಪಿಸಿದ್ದಾರೆ.
ತೋಷಖಾನಾ ಭ್ರಷ್ಟಾಚಾರ ಪ್ರಕರಣದಲ್ಲಿ ಇಸ್ಲಾಮಾಬಾದ್‌ನ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಕಳೆದ ಶನಿವಾರ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಮೂರು ವರ್ಷಗಳ ಸಜೆ ವಿಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.