ADVERTISEMENT

ಬಲೂಚ್‌ ಉಗ್ರರಿಂದ ಪಾಕಿಸ್ತಾನದ ಸಂಸ್ಥಾಪಕ ಮೊಹ್ಮದ್‌ ಆಲಿ ಜಿನ್ನಾ ಪ್ರತಿಮೆ ಧ್ವಂಸ

ಪಿಟಿಐ
Published 27 ಸೆಪ್ಟೆಂಬರ್ 2021, 8:30 IST
Last Updated 27 ಸೆಪ್ಟೆಂಬರ್ 2021, 8:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕರಾಚಿ: ಬಲೂಚಿಸ್ತಾನ ಪ್ರಾಂತ್ಯದ ಕರಾವಳಿ ನಗರ ಗ್ವಾದರ್‌ನಲ್ಲಿದ್ದ ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್‌ ಆಲಿ ಜಿನ್ನಾ ಅವರ ಪುತ್ಥಳಿಯನ್ನು ಬಲೂಚ್‌ ಉಗ್ರರು ಬಾಂಬ್‌ ದಾಳಿ ನಡೆಸಿ ಧ್ವಂಸಗೊಳಿಸಿದ್ದಾರೆ.

ಸುರಕ್ಷಿತ ವಲಯವೆಂದೇ ಗುರುತಿಸಲಾಗಿದ್ದ ನಗರದ ಮೆರೈನ್ ಡ್ರೈವ್‌ ಪ್ರದೇಶದಲ್ಲಿ ಕಳೆದ ಜೂನ್‌ನಲ್ಲಿ ಸ್ಥಾಪಿಸಿದ್ದ ಜಿನ್ನಾ ಪ್ರತಿಮೆಯನ್ನು, ಉಗ್ರರು ಭಾನುವಾರ ಬೆಳಿಗ್ಗೆ ಪ್ರತಿಮೆಯ ಕೆಳಗೆ ಬಾಂಬ್‌ ಇಟ್ಟು ಸ್ಫೋಟಿಸಿದ್ದಾರೆ ಎಂದು ಸೋಮವಾರ ಡಾನ್ ಪತ್ರಿಕೆ ವರದಿ ಮಾಡಿದೆ. ಸ್ಫೋಟದಿಂದಾಗಿ ಪ್ರತಿಮೆ ಸಂಪೂರ್ಣವಾಗಿ ನಾಶವಾಗಿದೆ ಎಂದು ವರದಿಯಲ್ಲಿ ಹೇಳಿದೆ.

ನಿಷೇಧಿತ ಭಯೋತ್ಪಾದಕ ಸಂಘಟನೆ ಬಲೂಚ್‌ ರಿಪಬ್ಲಿಕನ್‌ ಆರ್ಮಿಯ ವಕ್ತಾರ ಬಾಬ್ಗರ್‌ ಬಲೂಚ್‌ ಈ ಸ್ಫೋಟದ ಹೊಣೆ ಹೊತ್ತುಕೊಂಡಿರುವುದಾಗಿ ಟ್ವೀಟ್‌ ಮಾಡಿದ್ದಾರೆ ಎಂದು ಬಿಬಿಸಿ – ಉರ್ದು ವರದಿ ಮಾಡಿದೆ.

ADVERTISEMENT

‘ಪ್ರತಿಮೆ ಸ್ಫೋಟ ಪ್ರಕರಣ ಕುರಿತು ಉನ್ನತಮಟ್ಟದಲ್ಲಿ ತನಿಖೆ ನಡೆಸಲಾಗುತ್ತಿದೆ‘ ಎಂದು ಗ್ವಾದರ್ ನಗರದ ಉಪ ಆಯುಕ್ತ ನಿವೃತ್ತ ಮೇಜರ್‌ ಅಬ್ದುಲ್ ಕಬೀರ್ ಖಾನ್ ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಿದೆ.

ಪ್ರವಾಸಿಗರ ಸೋಗಿನಲ್ಲಿ ಮೆರೈನ್ ಡ್ರೈವ್ ಪ್ರದೇಶವನ್ನು ಪ್ರವೇಶಿಸಿರುವ ಉಗ್ರರು, ಬಾಂಬ್‌ ಸ್ಫೋಟಿಸಿ ಜಿನ್ನಾ ಪ್ರತಿಮೆ ಧ್ವಂಸಗೊಳಿಸಿದ್ದಾರೆ ಎಂದು ಖಾನ್ ಹೇಳಿದ್ದಾಗಿ ವರದಿಯಲ್ಲಿ ಉಲ್ಲೇಖವಾಗಿದೆ.

‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿವರೆಗೆ ಯಾರನ್ನೂ ಬಂಧಿಸಿಲ್ಲ. ಆದರೆ, ಒಂದೆರಡು ದಿನಗಳಲ್ಲಿ ತನಿಖೆ ಪೂರ್ಣಗೊಳ್ಳುತ್ತದೆ. ಎಲ್ಲ ಕೋನಗಳಿಂದಲೂ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುತ್ತದೆ‘ ಎಂದು ಕಬೀರ್ ಖಾನ್ ಹೇಳಿದ್ದಾರೆ.

‘ಗ್ವಾದರ್‌ನಲ್ಲಿ ಈ ಹಿಂದೆ ಕ್ವಾಯ್ಡ್-ಎ-ಅಜಮ್ ಪ್ರತಿಮೆ ಧ್ವಂಸಗೊಳಿಸಿದ್ದ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಂತೆ, ಈ ಪ್ರಕರಣದ ಆರೋಪಿಗಳನ್ನು ಶಿಕ್ಷಿಸಬೇಕು ಎಂದು ಅಧಿಕಾರಿಗಳನ್ನು ವಿನಂತಿಸುವುದಾಗಿ ಬಲೂಚಿಸ್ತಾನದ ಮಾಜಿ ಗೃಹ ಸಚಿವ ಮತ್ತು ಹಾಲಿ ಸೆನೆಟರ್ ಸರ್ಫ್ರಾಜ್ ಬುಗ್ತಿ ಟ್ವೀಟ್ ಮಾಡಿದ್ದಾರೆ.

ಇದೇ ಪ್ರಾಂತ್ಯದ ಜೈರಾತ್‌ನಲ್ಲಿ, ಜಿನ್ನಾ ಅವರು ತಮ್ಮ ಕೊನೆಯ ದಿನಗಳನ್ನು ಕಳೆದಿದ್ದ 121 ವರ್ಷಗಳಷ್ಟು ಪುರಾತನ ಕಟ್ಟಡ ಕ್ವಾಯ್ಡ್‌–ಇ–ಅಜಾಮ್‌ ರೆಸಿಡೆನ್ಸಿ ಮೇಲೆ 2013ರಲ್ಲಿ ಬಲೂಚ್‌ ಉಗ್ರರು ಗುಂಡಿನ ದಾಳಿ ನಡೆಸಿ, ಸ್ಫೋಟಿಸಿದ್ದರು. ಈ ದಾಳಿಯಿಂದಾಗಿ ಕಟ್ಟಡ ಬೆಂಕಿಗೆ ಆಹುತಿಯಾಯಿತು. ನಾಲ್ಕು ಗಂಟೆಗಳ ಕಾಲ ಉರಿದ ಬೆಂಕಿಯ ಜ್ವಾಲೆಗೆ ಒಳಗಿದ್ದ ಪೀಠೋಪಕರಣಗಳು ಮತ್ತು ಸ್ಮರಣಿಕೆಗಳು ನಾಶವಾಗಿತ್ತು. ಕ್ಷಯರೋಗದಿಂದ ಬಳಲುತ್ತಿದ್ದ ಜಿನ್ನಾ ಅವರು ತಮ್ಮ ಜೀವನದ ಕೊನೆಯ ದಿನಗಳನ್ನು ಈ ಪುರಾತನ ಕಟ್ಟಡದಲ್ಲಿ ಕಳೆದಿದ್ದರು. ಅವರ ನಿಧನದ ನಂತರ ಈ ಕಟ್ಟಡವನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.