ಇಸ್ಲಾಮಾಬಾದ್: ಮರಣ ದಂಡನೆಗೆ ಗುರಿಯಾಗಿರುವ ಭಾರತದ ನೌಕಾಪಡೆಯ ನಿವೃತ್ತ ಅಧಿಕಾರಿ, ಕುಲಭೂಷಣ್ ಜಾಧವ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವ ಮಸೂದೆಗೆ ಪಾಕಿಸ್ತಾನದ ಸಂಸತ್ ಅನುಮೋದನೆ ನೀಡಿದೆ.
‘ಐಸಿಜೆ (ಮರುಪರಿಶೀಲನೆ ಹಾಗೂ ಮರುಪರಿಗಣನೆ) ಮಸೂದೆ, 2020’ಕ್ಕೆ ಸಂಸತ್ ಗುರುವಾರ ಅನುಮೋದನೆ ನೀಡಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಇದರಿಂದಾಗಿ, ಭಾರತದ ಕಾನ್ಸುಲರ್ ಕಚೇರಿಯ ಸಂಪರ್ಕ, ನೆರವು ಪಡೆಯಲುಜಾಧವ್ ಅವರಿಗೆ ಸಾಧ್ಯವಾಗಲಿದೆ.
ಪಾಕಿಸ್ತಾನದಲ್ಲಿ ಗೂಢಚಾರಿಕೆ ನಡೆಸಿದ ಹಾಗೂ ವಿಧ್ವಂಸಕ ಕೃತ್ಯಕ್ಕೆ ಯತ್ನಿಸಿದ ಆರೋಪದಡಿ ಬಂಧಿತರಾಗಿರುವ 51 ವರ್ಷದ ಜಾಧವ್ ಅವರಿಗೆ ಮಿಲಿಟರಿ ಕೋರ್ಟ್ ಮರಣ ದಂಡನೆ ವಿಧಿಸಿದೆ.
ಈ ತೀರ್ಪನ್ನು ಪ್ರಶ್ನಿಸಿ ಭಾರತವು ಅಂತರರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ಮೊರೆ ಹೋಗಿತ್ತು. ಜಾಧವ್ ಅವರಿಗೆ ಕಾನ್ಸುಲರ್ ಕಚೇರಿ ಸಂಪರ್ಕ ಒದಗಿಸಿಲ್ಲ ಎಂದು ವಾದಿಸಿದ್ದ ಭಾರತ, ಮರಣ ದಂಡನೆ ವಿಧಿಸಿರುವುದನ್ನು ಪ್ರಶ್ನಿಸಿತ್ತು.
ಅರ್ಜಿಯ ವಿಚಾರಣೆ ನಡೆಸಿದ್ದ ಐಸಿಜೆ, ಜಾಧವ್ ಅವರಿಗೆ ಕಾನ್ಸುಲರ್ ಕಚೇರಿಯ ನೆರವು ಒದಗಿಸಬೇಕು, ಶಿಕ್ಷೆಯ ಮರುಪರಿಶೀಲನೆ ನಡೆಸಬೇಕು ಎಂದು 2019ರ ಜುಲೈನಲ್ಲಿ ಆದೇಶಿಸಿತ್ತು.
ತನಗೆ ವಿಧಿಸಲಾಗಿರುವ ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿ, ಮೇಲ್ಮನವಿ ಸಲ್ಲಿಸಲು ಸಹ ಜಾಧವ್ ಅವರಿಗೆ ಸೂಕ್ತ ಅವಕಾಶವನ್ನು ಒದಗಿಸುವಂತೆಯೂ ಐಸಿಜೆ ಸೂಚಿಸಿತ್ತು.
ಮಸೂದೆಗೆ ಅನುಮೋದನೆ ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಕಾನೂನು ಸಚಿವ ಫಾರೂಕ್ ನಾಸಿಮ್, ‘ಒಂದು ವೇಳೆ ಸಂಸತ್ ಈ ಮಸೂದೆಗೆ ಅನುಮೋದನೆ ನೀಡದೇ ಇದ್ದಿದ್ದರೆ, ಭಾರತ ಈ ವಿಷಯವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಹೋಗುತ್ತಿತ್ತು. ಐಸಿಜೆಯಲ್ಲಿ ಪಾಕಿಸ್ತಾನದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುತ್ತಿತ್ತು’ ಎಂದು ಹೇಳಿದರು.
ಈ ಮಸೂದೆಗೆ ಅನುಮೋದನೆ ನೀಡಿರುವುದಕ್ಕೆ ಪಾಕಿಸ್ತಾನ ಮುಸ್ಲಿಂ ಲೀಗ್–ನವಾಜ್ (ಪಿಎಂಎಲ್–ಎನ್) ಪಕ್ಷವು ಸರ್ಕಾರವನ್ನು ಟೀಕಿಸಿದೆ. ಜಾಧವ್ ಬಿಡುಗಡೆಗೆ ಅನುಕೂಲವಾಗಲು ಸರ್ಕಾರ ಈ ಮಸೂದೆಗೆ ಅನುಮೋದನೆ ನೀಡಿದೆ’ ಎಂದು ಪಕ್ಷದ ಸಂಸದ ಅಹಸಾನ್ ಇಕ್ಬಾಲ್ ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.