ಇಸ್ಲಾಮಾಬಾದ್: ಪಾಕಿಸ್ತಾನದ ನೂತನ ಅಧ್ಯಕ್ಷರ ಆಯ್ಕೆಗೆ ಮಾರ್ಚ್ 9ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಶುಕ್ರವಾರ ಪ್ರಕಟಿಸಿದೆ. ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿಯವರೇ 11 ವರ್ಷಗಳ ಬಳಿಕ ಮತ್ತೆ ಅಧ್ಯಕ್ಷರಾಗುವ ಸಾಧ್ಯತೆ ಇದೆ.
ಹಾಲಿ ಅಧ್ಯಕ್ಷ ಡಾ. ಆರಿಫ್ ಅಲ್ವಿ ಅವರ ಐದು ವರ್ಷಗಳ ಅವಧಿ ಕಳೆದ ವರ್ಷವೇ ಮುಕ್ತಾಯವಾಗಿತ್ತು. ಆದರೆ ಎಲೆಕ್ಟರಲ್ ಕಾಲೇಜು ರಚನೆಯಾಗದ ಕಾರಣ ಅವರನ್ನೇ ಮುಂದುವರಿಸಲಾಗಿತ್ತು.
ಸಂಸತ್ ಹಾಗೂ ಪ್ರಾಂತೀಯ ಅಸೆಂಬ್ಲಿಯನ್ನು 2023ರ ಆಗಸ್ಟ್‌ನಲ್ಲಿ ವಿಸರ್ಜಿಸಿದ್ದರಿಂದ ನೂತನ ಅಧ್ಯಕ್ಷರ ಆಯ್ಕೆ ಆಗಿರಲಿಲ್ಲ.
ರಾಷ್ಟ್ರೀಯ ಸಂಸತ್ ಹಾಗೂ ಪ್ರಾಂತೀಯ ಅಸೆಂಬ್ಲಿಗಳು ಅಧ್ಯಕ್ಷರನ್ನು ಆಯ್ಕೆ ಮಾಡುವ ಎಲೆಕ್ಟರಲ್ ಕಾಲೇಜನ್ನು ರಚನೆ ಮಾಡುತ್ತವೆ.
ಮಾರ್ಚ್ 2ರ ಮಧ್ಯಾಹ್ನ 12 ಗಂಟೆಯೊಳಗೆ ನಾಮಪತ್ರ ಸಲ್ಲಿಸಬೇಕು. ಮಾರ್ಚ್ 4ರಂದು ನಾಮಪತ್ರ ಪರೀಶಿಲನೆ ನಡೆಯಲಿದೆ. ಮಾ.5ರಂದು ನಾಮಪತ್ರ ಹಿಂಪಡೆಯಬಹುದು. ಬಳಿಕ ಅಂಗೀಕೃತ ನಾಮಪತ್ರಗಳ ಪಟ್ಟಿಯನ್ನು ಆಯೋಗ ಪ್ರಕಟಿಸಲಿದ್ದು, ಮಾರ್ಚ್ 6ರಂದು ಅಭ್ಯರ್ಥಿ ಕಣದಿಂದ ನಿವೃತ್ತಿ ಪಡೆಯಬಹುದು. ಮಾರ್ಚ್ 9ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ.
ಆಸಿಫ್ ಅಲಿ ಜರ್ದಾರಿ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಹಾಗೂ ಪಾಕಿಸ್ತಾನ್ ಮುಸ್ಲಿಮ್ ಲೀಗ್–ನವಾಜ್ ಪಕ್ಷದ ಜಂಟಿ ಅಭ್ಯರ್ಥಿಯಾಗಿದ್ದು, ಅವರೇ ಗೆಲ್ಲುವ ಸಾಧ್ಯತೆ ಅಧಿಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.