ADVERTISEMENT

ನಕಲಿ ನೋಟುಗಳ ಹಾವಳಿ ನಿಯಂತ್ರಣಕ್ಕೆ ಹೊಸ ನೋಟುಗಳ ಬಿಡುಗಡೆ ಮಾಡಿದ ಪಾಕಿಸ್ತಾನ

ಪಿಟಿಐ
Published 30 ಜನವರಿ 2024, 11:13 IST
Last Updated 30 ಜನವರಿ 2024, 11:13 IST
<div class="paragraphs"><p>ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್</p></div>

ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್

   

ರಾಯಿಟರ್ಸ್ ಚಿತ್ರ

ಕರಾಚಿ: ನಕಲಿ ನೋಟುಗಳ ಹಾವಳಿ ತಪ್ಪಿಸಲು ಸುಧಾರಿತ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದ ಹೊಸ ನೋಟುಗಳನ್ನು ಪಾಕಿಸ್ತಾನದ ಕೇಂದ್ರೀಯ ಬ್ಯಾಂಕ್‌ ಹೊರತಂದಿದೆ.

ADVERTISEMENT

ಸ್ಟೇಟ್‌ ಬ್ಯಾಂಕ್ ಆಫ್ ಪಾಕಿಸ್ತಾನದ ಗವರ್ನರ್‌ ಜಮೀಲ್ ಅಹ್ಮದ್ ಅವರು ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿ, ‘ಹೊಸ ಕರೆನ್ಸಿ ನೋಟುಗಳು ಅಂತರರಾಷ್ಟ್ರೀಯ ಮಾನದಂಡಗಳನ್ನು ಒಳಗೊಂಡ ಅತ್ಯಾಧುನಿಕ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದೆ. ಇದರಲ್ಲಿ ಪ್ರತ್ಯೇಕ ಭದ್ರತಾ ಸಂಖ್ಯೆಗಳು ಹಾಗೂ ಆಧುನಿಕ ವಿನ್ಯಾಸ ಒಳಗೊಂಡಿದೆ’ ಎಂದು ತಿಳಿಸಿದ್ದಾರೆ.

‘ಈ ಹೊಸ ನೋಟುಗಳ ಪರಿಚಯದಿಂದಾಗಿ ಕರೆನ್ಸಿ ನೋಟುಗಳ ಬಳಕೆಯಲ್ಲಿ ಈ ಹಿಂದೆ ಕೆಲ ರಾಷ್ಟ್ರಗಳಲ್ಲಿ ಉಂಟಾದ ಸಮಸ್ಯೆ ಮತ್ತು ಸಾರ್ವಜನಿಕ ಭೀತಿಗಳು ಉಂಟಾಗದು’ ಎಂಬ ವಿಶ್ವಾಸ ವ್ಯಕ್ತಪಡಿಸಿದ್ಧಾರೆ.

‘ಕಪ್ಪು ಹಣ ಹಾಗೂ ನಕಲಿ ನೋಟುಗಳ ಹಾವಳಿ ತಡೆಯಲು ಹೊಸ ನೋಟುಗಳನ್ನು ಪರಿಚಯಿಸುತ್ತಿರುವುದು ಸ್ವಾಗತಾರ್ಹ. ಆದರೆ ಸದ್ಯ ಇರುವ 5 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಮುಖಬೆಲೆಯ ನೋಟುಗಳು ರದ್ದಾಗಲಿವೆಯೇ ಎಂಬುದು ಸ್ಪಷ್ಟವಾಗಿಲ್ಲ’ ಎಂದು ಕೆಲ ಆರ್ಥಿಕ ಪಂಡಿತರು ಅನುಮಾನ ವ್ಯಕ್ತಪಡಿಸಿದ್ದಾರೆ.

‘ನಗದು ಕೊರತೆ ಸಮಸ್ಯೆಯನ್ನು ಪಾಕಿಸ್ತಾನ ಸದ್ಯ ಎದುರಿಸುತ್ತಿದೆ. ಇದಕ್ಕೆ ಹೆಚ್ಚಿನ ಮುಖಬೆಲೆಯ ನೋಟುಗಳನ್ನು ಅಕ್ರಮವಾಗಿ ಕಪ್ಪು ಹಣವಾಗಿ ಬಳಕೆ ಮಾಡುತ್ತಿರುವುದೇ ಕಾರಣ. ಪಾಕಿಸ್ತಾನದ ಆರ್ಥಿಕ ಸದೃಢತೆ ಕಾಪಾಡಲು ಕೇಂದ್ರೀಯ ಬ್ಯಾಂಕ್ ಕೈಗೊಂಡ ಕ್ರಮ ಉತ್ತಮವೇ ಆದರೂ, ಇದರಲ್ಲಿ ನೋಟುಗಳ ರದ್ದತಿ ಕ್ರಮವೂ ಇರಲಿದೆಯೇ ಎಂಬುದನ್ನು ಕಾದುನೋಡಬೇಕು’ ಎಂದು ಕ್ಯಾಪಿಟಲ್ ಇನ್ವೆಸ್ಟ್‌ಮೆಂಟ್‌ನ ಸೊಹೈಲ್‌ ಫಾರೂಖಿ ಹೇಳಿದ್ದಾರೆ.

‘ಹೊಸ ನೋಟುಗಳ ಬಳಕೆ ವ್ಯಾಪಕವಾದಲ್ಲಿ, ದೇಶದ ಅರ್ಥ ವ್ಯವಸ್ಥೆ ಮೇಲೆ ಜನರಿಗೆ ಹಾಗೂ ವ್ಯಾವಹಾರಿಕ ಕ್ಷೇತ್ರದಲ್ಲಿರುವವರಲ್ಲಿ ಆತ್ಮವಿಶ್ವಾಸ ಹೆಚ್ಚಲಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.