ಇಸ್ಲಾಮಾಬಾದ್: ಭಾರತದ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ ನೀಡಿರುವ ಮರಣದಂಡನೆ ವಿರುದ್ಧ ಮರುಪರಿಶೀಲನಾ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ನೀಡುವುದಕ್ಕಾಗಿ ಹೊಸ ಕಾನೂನನ್ನು ಇಲ್ಲಿನ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಬುಧವಾರ ಅಂಗೀಕರಿಸಲಾಯಿತು.
ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಜಾಧವ್ (51) ಅವರಿಗೆ 2017ರ ಏಪ್ರಿಲ್‌ನಲ್ಲಿ ಬೇಹುಗಾರಿಕೆ ಮತ್ತು ಭಯೋತ್ಪಾದನೆಯ ಆರೋಪದ ಮೇಲೆ ಮಿಲಿಟರಿ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ಜಾಧವ್ ಅವರ ಮರಣದಂಡನೆ ಆದೇಶ ಪ್ರಶ್ನಿಸಿ ಭಾರತ ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ (ಐಸಿಜೆ) ಮೊರೆ ಹೋಗಿತ್ತು. ಈ ಕುರಿತು ಮರುಪರಿಶೀಲಿಸುವಂತೆ ಹಾಗೂ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸುವಂತೆ ಐಸಿಜೆ 2019 ರ ಜುಲೈನಲ್ಲಿ ತೀರ್ಪು ನೀಡಿತ್ತು.
ಇದೇ ವರ್ಷದ ಜೂನ್‌ನಲ್ಲಿ ಮಂಡಿಸಿದ್ದ ಹೊಸ ಕಾನೂನುಗಳನ್ನು ಅಂಗೀಕರಿಸಲು ಬುಧವಾರ ಸಂಸತ್ತಿನ ಜಂಟಿ ಅಧಿವೇಶನ ಕರೆಯಲಾಗಿತ್ತು. ಐಸಿಜೆ ತೀರ್ಪಿನ ಅಡಿಯಲ್ಲಿ ಹೊಸ ಕಾನೂನನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.