ADVERTISEMENT

ಇಸ್ರೇಲ್ -ಹಮಾಸ್ ಯುದ್ಧ: 30 ಸಾವಿರ ದಾಟಿದ ಪ್ಯಾಲೆಸ್ಟೀನ್‌ ಜನರ ಸಾವಿನ ಸಂಖ್ಯೆ

ಏಜೆನ್ಸೀಸ್
Published 29 ಫೆಬ್ರುವರಿ 2024, 12:53 IST
Last Updated 29 ಫೆಬ್ರುವರಿ 2024, 12:53 IST
<div class="paragraphs"><p>ಗಾಜಾದ ದಕ್ಷಿಣ ಭಾಗ</p></div>

ಗಾಜಾದ ದಕ್ಷಿಣ ಭಾಗ

   

ರಾಯಿಟರ್ಸ್ ಚಿತ್ರ

ರಫಾ/ಗಾಜಾ ಪಟ್ಟಿ: ಅಕ್ಟೋಬರ್‌ನಲ್ಲಿ ಪ್ರಾರಂಭವಾದ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ ಹತರಾದ ಪ್ಯಾಲೆಸ್ಟೀನ್‌ ಜನರ ಸಂಖ್ಯೆಯು 30 ಸಾವಿರ ಗಡಿ ದಾಟಿದೆ ಎಂದು ಗಾಜಾ ಆರೋಗ್ಯ ಸಚಿವಾಲಯವು ಗುರುವಾರ ತಿಳಿಸಿದೆ.

ADVERTISEMENT

ಹಮಾಸ್ ನಡೆಸಿದ ದಾಳಿಗೆ ಪ್ರತಿಯಾಗಿ ಇಸ್ರೇಲ್ ಸೇನೆಯು ಆರಂಭಿಸಿದ ದಾಳಿಯ ಮೊದಲ ಗುರಿ ಆಗಿದ್ದು ಗಾಜಾ ನಗರ ಹಾಗೂ ಗಾಜಾ ಪಟ್ಟಿಯ ಉತ್ತರ ಭಾಗ. ಈ ಪ್ರದೇಶದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಹಾನಿ ಉಂಟಾಗಿದೆ, ಇದು ಗಾಜಾ ಪಟ್ಟಿಯ ಇತರ ಪ್ರದೇಶಗಳ ಜೊತೆಗಿನ ಸಂಪರ್ಕವನ್ನು ಬಹುತೇಕ ಕಡಿದುಕೊಂಡಿದೆ.

ಅಪೌಷ್ಟಿಕತೆ, ನಿರ್ಜಲೀಕರಣ ಹಾಗೂ ಆಹಾರ ಕೊರತೆಯ ಕಾರಣದಿಂದಾಗಿ ಗಾಜಾ ನಗರದ ಅಲ್–ಶಿಫಾ ಆಸ್ಪತ್ರೆಯಲ್ಲಿ ಮಕ್ಕಳು ಮೃತ‍ಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಇಂತಹ ಸಾವುಗಳು ಇನ್ನಷ್ಟು ಆಗುವುದನ್ನು ತಡೆಯಲು ಅಂತರರಾಷ್ಟ್ರೀಯ ಸಂಘಟನೆಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಸಚಿವಾಲಯದ ವಕ್ತಾರ ಅಶ್ರಫ್ ಅಲ್–ಕುದ್ರಾ ಮನವಿ ಮಾಡಿದ್ದಾರೆ.

ಗಾಜಾ ಪಟ್ಟಿಯಲ್ಲಿ ಬುಧವಾರ ರಾತ್ರಿ ನಡೆದ ದಾಳಿಗಳಲ್ಲಿ ಕನಿಷ್ಠ 79 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯವು ಗುರುವಾರ ಹೇಳಿದೆ.

ಇಸ್ರೇಲ್ ಮತ್ತು ಹಮಾಸ್ ನಡುವೆ ಕನಿಷ್ಠ ಆರು ವಾರಗಳ ಕದನ ವಿರಾಮ ಜಾರಿಗೆ ತರಲು ಈಜಿಪ್ಟ್‌, ಕತಾರ್ ಮತ್ತು ಅಮೆರಿಕದ ಮಧ್ಯಸ್ಥಿಕೆದಾರರು ಯತ್ನಿಸುತ್ತಿದ್ದಾರೆ. ರಂಜಾನ್‌ ಮಾಸ ಶುರುವಾಗುವ ಮೊದಲೇ ಕದನ ವಿರಾಮ ಘೋಷಣೆ ಸಾಧ್ಯವಾಗಬಹುದು ಎಂಬ ಭರವಸೆಯಲ್ಲಿ ಅವರಿದ್ದಾರೆ.

ಗಾಜಾ ಪಟ್ಟಿಯ ಉತ್ತರ ಭಾಗಕ್ಕೆ ಅಗತ್ಯ ವಸ್ತುಗಳನ್ನು ರವಾನಿಸಲು ನೆರವು ಸಂಸ್ಥೆಗಳಿಗೆ ಒಂದು ತಿಂಗಳಿಗೂ ಹೆಚ್ಚಿನ ಅವಧಿಯಿಂದ ಸಾಧ್ಯವಾಗಿಲ್ಲ, ಅಲ್ಲಿಗೆ ಅಗತ್ಯ ವಸ್ತುಗಳನ್ನು ರವಾನಿಸುವುದು ಸಾಧ್ಯವಿಲ್ಲದ ಪರಿಸ್ಥಿತಿಯನ್ನು ಇಸ್ರೇಲ್ ಸೃಷ್ಟಿಸಿದೆ ಎಂದು ವಿಶ್ವ ಆರೋಗ್ಯ ಕಾರ್ಯಕ್ರಮದ ಪ್ರತಿನಿಧಿಗಳು ಆರೋಪಿಸಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ಉತ್ತರ ಗಾಜಾದಲ್ಲಿ ಕ್ಷಾಮ ಸೃಷ್ಟಿಯಾಗಬಹುದು ಎಂದು ಕಾರ್ಯಕ್ರಮದ ಉಪ ಕಾರ್ಯನಿರ್ವಾಹಕ ನಿರ್ದೇಶಕ ಕಾರ್ಲ್‌ ಸ್ಕೌ ಹೇಳಿದ್ದಾರೆ.

ಆದರೆ ಅಡ್ಡಿಗಳನ್ನು ಸೃಷ್ಟಿಸಲಾಗುತ್ತಿದೆ ಎಂಬ ಆರೋಪವನ್ನು ಇಸ್ರೇಲ್ ಅಲ್ಲಗಳೆದಿದೆ.

ಹಮಾಸ್‌ ಬಂಡುಕೋರರು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿರುವ ಇಸ್ರೇಲ್ ಪ್ರಜೆಗಳನ್ನು ಬಂಧಮುಕ್ತಗೊಳಿಸಬೇಕು ಎಂಬ ಒತ್ತಡವು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮೇಲೆ ಹೆಚ್ಚುತ್ತಿದೆ. ಒಪ್ಪಂದವೊಂದನ್ನು ಮಾಡಿಕೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಲು 150 ಮಂದಿ ಇಸ್ರೇಲ್ ನಾಗರಿಕರು ಗಾಜಾ ಗಡಿಯಿಂದ ಜೆರುಸಲೇಮ್‌ವರೆಗೆ ಕಾಲ್ನಡಿಗೆ ಆರಂಭಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.