ದೇರ್ ಅಲ್–ಬಲಾಹ್ (ಗಾಜಾ ಪಟ್ಟಿ): ಇಸ್ರೇಲ್ ಸೇನೆ ನಡೆಸಿದ ವೈಮಾನಿಕ ದಾಳಿಯಿಂದ ಗಾಜಾ ಪಟ್ಟಿಯಲ್ಲಿ 30 ಜನರು ಮೃತಪಟ್ಟಿದ್ದಾರೆ. ಮೃತರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ಪ್ಯಾಲೆಸ್ಟೀನ್‌ನ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಗಾಜಾ ಪಟ್ಟಿಯಲ್ಲಿ ಮಂಗಳವಾರ ನಸುಕಿನಲ್ಲಿ ನಡೆದ ದಾಳಿಯಲ್ಲಿ ನಾಲ್ಕು ಮಕ್ಕಳು ಮತ್ತು ಇಬ್ಬರು ಮಹಿಳೆಯರು ಸೇರಿ 10 ಜನರು ಮೃತಪಟ್ಟಿದ್ದಾರೆ. ಉತ್ತರ ಗಾಜಾ ಪಟ್ಟಣದ ಬೇತ್ ಲಾಹಿಯಾದಲ್ಲಿ ಸೋಮವಾರ ತಡರಾತ್ರಿ ನಡೆದ ವೈಮಾನಿಕ ಬಾಂಬ್ ದಾಳಿಯಲ್ಲಿ ಎಂಟು ಮಹಿಳೆಯರು ಮತ್ತು ಆರು ಮಕ್ಕಳು ಸೇರಿ 20 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಾಳುಗಳು ದಾಖಲಾಗಿರುವ ಹತ್ತಿರದ ಆಸ್ಪತ್ರೆಯ ನಿರ್ದೇಶಕ ಹೊಸಮ್ ಅಬು ಸಫಿಯಾ, ಬೆತ್ ಲಾಹಿಯಾ ಪಟ್ಟಣದಲ್ಲಿ ಹಲವು ಕುಟುಂಬಗಳು ಆಶ್ರಯ ಪಡೆದಿದ್ದ ಮನೆ ಮೇಲೆ ಸೋಮವಾರ ತಡರಾತ್ರಿ ವೈಮಾನಿಕ ದಾಳಿ ನಡೆದಿದೆ ಎಂದು ಹೇಳಿದ್ದಾರೆ.
ದಾಳಿ ಬಗ್ಗೆ ಇಸ್ರೇಲ್ ಸೇನೆ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಗಾಜಾ ಮತ್ತು ಲೆಬನಾನ್‌ನಲ್ಲಿ ಕದನ ವಿರಾಮಕ್ಕಾಗಿ ಅಮೆರಿಕ ಹಾಗೂ ಇತರ ದೇಶಗಳನ್ನು ಒಳಗೊಂಡ ಅಂತರರಾಷ್ಟ್ರೀಯ ಸಮುದಾಯದಿಂದ ಹೆಚ್ಚುತ್ತಿರುವ ಒತ್ತಡದ ಹೊರತಾಗಿಯೂ ಹಿಜ್ಬುಲ್ಲಾ ಬಂಡುಕೋರರ ವಿರುದ್ಧ ಇಸ್ರೇಲ್ ಭಾರಿ ಕಾರ್ಯಾಚರಣೆ ನಡೆಸುತ್ತಿದೆ. ಇಸ್ರೇಲ್ ನಡೆಸುತ್ತಿರುವ ವೈಮಾನಿಕ ದಾಳಿಗಳು ಲೆಬನಾನ್‌ನ ಗಡಿ ಪ್ರದೇಶಗಳನ್ನು ಮೀರಿ ವಿಸ್ತರಿಸಿವೆ. ಉತ್ತರ ಗಾಜಾದಲ್ಲಿ ಹಮಾಸ್ ವಿರುದ್ಧವೂ ಇಸ್ರೇಲ್ ಯುದ್ಧ ಮುಂದುವರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.