ADVERTISEMENT

Israel–Hamas war: ಹಮಾಸ್‌ ಮುಖ್ಯಸ್ಥ ಸಿನ್ವರ್ ಹತ್ಯೆ?

ಸಾವು ದೃಢಪಡಿಸಲು ಇಸ್ರೇಲ್‌ ಸೇನೆಯಿಂದ ಡಿಎನ್‌ಎ ಪರೀಕ್ಷೆ

ರಾಯಿಟರ್ಸ್
Published 17 ಅಕ್ಟೋಬರ್ 2024, 22:51 IST
Last Updated 17 ಅಕ್ಟೋಬರ್ 2024, 22:51 IST
ಗಾಜಾದ ಅಲ್‌ ಶಾತಿ ನಿರಾಶ್ರಿತರ ಶಿಬಿರದಲ್ಲಿರುವ ಪ್ಯಾಲೆಸ್ಟೀನಿಯರಿಗೆ ಆಹಾರ ವಿತರಿಸಲಾಯಿತು –ಎಎಫ್‌ಪಿ ಚಿತ್ರ
ಗಾಜಾದ ಅಲ್‌ ಶಾತಿ ನಿರಾಶ್ರಿತರ ಶಿಬಿರದಲ್ಲಿರುವ ಪ್ಯಾಲೆಸ್ಟೀನಿಯರಿಗೆ ಆಹಾರ ವಿತರಿಸಲಾಯಿತು –ಎಎಫ್‌ಪಿ ಚಿತ್ರ   

ಜೆರುಸಲೇಂ/ದಾರ್ ಅಲ್‌ ಬಲಾ: ‘ಗಾಜಾದಲ್ಲಿ ಗುರುವಾರ ನಡೆಸಿದ ಕಾರ್ಯಾಚರಣೆಯಲ್ಲಿ ಹಮಾಸ್‌ ಸಂಘಟನೆಯ ಮುಖ್ಯಸ್ಥ ಯಹ್ಯಾ ಸಿನ್ವರ್‌ (61) ಅವರು ಮೃತಪಟ್ಟಿರಬಹುದು’ ಎಂದು ಇಸ್ರೇಲ್‌ ಸೇನೆ ಹೇ‌ಳಿಕೆ ಬಿಡುಗಡೆ ಮಾಡಿದೆ.

‘ನಮ್ಮ ಕಾರ್ಯಾಚರಣೆಯಲ್ಲಿ ಒಟ್ಟು ಮೂವರು ಬಂಡುಕೋರರು ಮೃತಪಟ್ಟಿದ್ದು, ಇವರಲ್ಲಿ ಸಿನ್ವರ್‌ ಕೂಡ ಒಬ್ಬರಿರಬಹುದು’ ಎಂದಿದೆ.

‘ಮೃತರಲ್ಲಿ ಸಿನ್ವರ್‌ ಇರಬಹು‌ದೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಡಿಎನ್‌ಎ ಪರೀಕ್ಷೆ ನಡೆಸಲಾಗುತ್ತಿದೆ’ ಎಂದು ಇಸ್ರೇಲ್‌ ಸೇನೆ ತಿಳಿಸಿದೆ. ಯಾವಾಗ, ಎಲ್ಲಿ ದಾಳಿ ಮಾಡಲಾಗಿದೆ ಎಂಬುದರ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ADVERTISEMENT

ಸಿನ್ವರ್ ಸಾವಿನ ಕುರಿತು ಹಮಾಸ್‌ ಇದುವರೆಗೂ ‌ಪ್ರತಿಕ್ರಿಯೆ ನೀಡಿಲ್ಲ. ‘ಸಿನ್ವರ್‌ ಕುರಿತು ಹಮಾಸ್‌ ನೀಡುವ ಮಾಹಿತಿಯನ್ನು ಮಾತ್ರವೇ ನಂಬಿ. ಇಸ್ರೇಲ್‌ನ ಮಾಧ್ಯಮಗಳು ನೀಡುವ ಮಾಹಿತಿಗಳನ್ನು ನಂಬಬೇಡಿ. ಅವುಗಳು ನಮ್ಮ ಮನೋಬಲ ಕುಗ್ಗಿಸುವುದಕ್ಕೆ ಸುದ್ದಿ ಬಿತ್ತರಿಸುತ್ತವೆ’ ಎಂದು ಹಮಾಸ್‌ ಬೆಂಬಲಿತ ‘ಅಲ್‌–ಮಜ್ದ್‌’ ವೆಬ್‌ಸೈಟ್‌ನಲ್ಲಿ ಪೋಸ್ಟ್‌ವೊಂದು ಹಂಚಿಕೆಯಾಗಿದೆ.

‘ದಕ್ಷಿಣ ಗಾಜಾದ ರಫಾ ನಗರದಲ್ಲಿ ನೆಲ ಮಾರ್ಗದಲ್ಲಿ ನಡೆಸಿದ ದಾಳಿಯ ವೇಳೆ ಸಿನ್ವರ್ ಅವರನ್ನು ಸೇನೆ ಹತ್ಯೆ ಮಾಡಿದೆ’ ಎಂದು ಇಸ್ರೇಲ್‌ ಸೇನೆಯ ರೇಡಿಯೊ ವಾಹಿನಿವೊಂದು ಸುದ್ದಿ ಬಿತ್ತರಿಸಿದೆ. ‘ಮೂವರು ಬಂಡುಕೋರರಲ್ಲಿ ಸಿನ್ವರ್‌ ಅವರ ಮೃತದೇಹವಿರುವ ದೃಶ್ಯಗಳ ವಿಡಿಯೊ, ಸೇನೆಯ ಬಳಿ ಇದೆ’ ಎಂದೂ ಅದು ಹೇಳಿದೆ. ಸಿನ್ವರ್‌ ಅವರ ಇಸ್ರೇಲ್‌ನ ಜೈಲಿನಲ್ಲಿದ್ದ ಸಮಯದಲ್ಲಿ, ಅವರ ಡಿಎನ್‌ಎ ಮಾದರಿಗಳನ್ನು ಇಸ್ರೇಲ್‌ ಸಂಗ್ರಹಿಸಿ ಇಟ್ಟುಕೊಂಡಿದೆ.

2023ರ ಅಕ್ಟೋಬರ್‌ 1ರಂದು ಹಮಾಸ್‌ ಬಂಡುಕೋರರು ಇಸ್ರೇಲ್‌ ಮೇಲೆ ನಡೆಸಿದ ದಾಳಿಯ ಹಲವು ಹಂಚುಕೋರರಲ್ಲಿ ಸಿನ್ವರ್‌ ಕೂಡ ಒಬ್ಬರು ಎಂದು ಇಸ್ರೇಲ್‌ ಆರೋಪಿಸಿದೆ. ಗಾಜಾದ ಮೇಲೆ ಯುದ್ಧ ಆರಂಭಿಸಿದ ದಿನಗಳಿಂದಲೂ ಸಿನ್ವರ್‌ ಅವರನ್ನು ಹತ್ಯೆ ಮಾಡುವುದಾಗಿ ಇಸ್ರೇಲ್‌ ಹೇಳುತ್ತಲೇ ಬಂದಿದೆ.

ಹಮಾಸ್‌ ಮುಖ್ಯಸ್ಥ ಇಸ್ಮಾಯಿಲ್‌ ಹನಿಯೆ ಅವರನ್ನು ಇಸ್ರೇಲ್‌ ಸೇನೆಯು 2024ರ ಜುಲೈನಲ್ಲಿ ಹತ್ಯೆ ಮಾಡಿತ್ತು. ಹನಿಯೆ ಹತ್ಯೆ ಬಳಿಕ, ಸಿನ್ವರ್‌ ಅವರು ಹಮಾಸ್‌ನ ಮುಖ್ಯಸ್ಥರಾಗಿದ್ದರು.

ಯಹ್ಯಾ ಸಿನ್ವರ್
ನೀವು ನಿಮ್ಮ ಶತ್ರುವನ್ನು ಬಿಡದೇ ಬೆನ್ನುಹತ್ತಿದರೆ ಅವರು ನಿಮ್ಮ ಕತ್ತಿಯ ಮುಂದೆ ಮಂಡಿಯೂರುತ್ತಾರೆ’ ಎಂದು ಲೆವಿಟಿಕಸ್‌ 26 (ಮೋಸೆಸ್‌ ಅವರ ಮೂರನೇ ಪುಸ್ತಕ) ಹೇಳುತ್ತದೆ. ನಮ್ಮ ಶತ್ರುಗಳು ನಮ್ಮ ಕಣ್ತಪ್ಪಿಸಿ ಓಡಾಡಲು ಸಾಧ್ಯವಿಲ್ಲ. ನಾವು ಅವರನ್ನು ಹುಡುಕಿ ಹತ್ಯೆ ಮಾಡುತ್ತೇವೆ.
–ಯೊಯಾವ್‌ ಗಲಾಂಟ್‌, ಇಸ್ರೇಲ್‌ನ ರಕ್ಷಣಾ ಸಚಿವ

ನಿರಾಶ್ರಿತ ಶಿಬಿರದ ಮೇಲೆ ದಾಳಿ: 15 ಸಾವು

‘ಗಾಜಾಪಟ್ಟಿಯ ಉತ್ತರದ ಜಬಲಿಯಾ ನಗರದಲ್ಲಿನ ನಿರಾಶ್ರಿತ ಶಿಬಿರದ ಮೇಲೆ ಇಸ್ರೇಲ್‌ ಗುರುವಾರ ನಡೆಸಿದ ದಾಳಿಯಲ್ಲಿ ಐವರು ಮಕ್ಕಳು ಸೇರಿದಂತೆ 15 ಮಂದಿ ಮೃತಪಟ್ಟಿದ್ದಾರೆ’ ಎಂದು ಗಾಜಾ ಆರೋಗ್ಯ ಸಚಿವಾಲಯ ಹೇಳಿದೆ. 

ಜಬಲಿಯಾ ನಗರದ ಮೇಲೆ ಹಲವು ದಿನಗಳಿಂದ ಇಸ್ರೇಲ್‌ ಸೇನೆ ವಾಯು ಹಾಗೂ ನೆಲ ಮಾರ್ಗವಾಗಿ ದಾಳಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ನಿರಾಶ್ರಿತರು ಅಬು ಹುಸೇನ್‌ ಎಂಬ ಶಾಲೆಯಲ್ಲಿ ಆಶ್ರಯ ಪಡೆದುಕೊಂಡಿದ್ದರು. ಇಸ್ರೇಲ್‌ ಸೇನೆ ಈ ಶಾಲೆಯ ಮೇಲೆ ದಾಳಿ ನಡೆಸಿದೆ.

‘ಈ ಶಾಲೆಯಲ್ಲಿ ಹಮಾಸ್‌ ಬಂಡುಕೋರರು ಹಾಗೂ ಜಿಹಾದಿ ಉಗ್ರರು ಆಶ್ರಯ ಪಡೆದುಕೊಂಡಿದ್ದರು.  ಬಂಡುಕೋರರು ಶಾಲೆಯನ್ನು ಕಮಾಂಡ್‌ ಕೇಂದ್ರವಾಗಿ ಬಳಸುತ್ತಿದ್ದರು. ಇವರನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ’ ಎಂದು ಇಸ್ರೇಲ್‌ ಸೇನೆ ಪ್ರತಿಕ್ರಿಯಿಸಿದೆ. ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾದ ಉಗ್ರರು, ಬಂಡುಕೋರರ ಹೆಸರುಗಳ ಪಟ್ಟಿಯನ್ನು ಇಸ್ರೇಲ್‌ ಸೇನೆ ನೀಡಿದೆ. ದಾಳಿಯ ವೇಳೆ ಈ ಎಲ್ಲರೂ ಶಾಲೆಯಲ್ಲಿದ್ದರು ಎಂದೂ ಅದು ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.