ADVERTISEMENT

ಕೆನ್ಯಾ: ಸಂಸತ್‌ ಭವನದಲ್ಲಿ ಭಾಗಶಃ ಬೆಂಕಿ

ಪ್ರಸ್ತಾವಿತ ತೆರಿಗೆ ವಿರೋಧಿಸಿ ಮುಂದುವರಿದ ಪ್ರತಿಭಟನೆ * ಪೊಲೀಸರಿಂದ ಕೆಲವ ಅಪಹರಣ ಆರೋಪ

ಏಜೆನ್ಸೀಸ್
Published 25 ಜೂನ್ 2024, 16:24 IST
Last Updated 25 ಜೂನ್ 2024, 16:24 IST
<div class="paragraphs"><p>ಹೊಸ ತೆರಿಗೆಗಳನ್ನು ವಿರೋಧಿಸಿ ಕೆನ್ಯಾ ರಾಜಧಾನಿ ನೈರೋಬಿಯಲ್ಲಿ ಪ್ರತಿಭಟನೆ ನಡೆಸುತ್ತಿರುವವರನ್ನು ಚದುರಿಸಲು ಪೊಲೀಸರು ಮಂಗಳವಾರ ಗಾಳಿಯಲ್ಲಿ ಗುಂಡು ಹಾರಿಸಿದರು </p></div>

ಹೊಸ ತೆರಿಗೆಗಳನ್ನು ವಿರೋಧಿಸಿ ಕೆನ್ಯಾ ರಾಜಧಾನಿ ನೈರೋಬಿಯಲ್ಲಿ ಪ್ರತಿಭಟನೆ ನಡೆಸುತ್ತಿರುವವರನ್ನು ಚದುರಿಸಲು ಪೊಲೀಸರು ಮಂಗಳವಾರ ಗಾಳಿಯಲ್ಲಿ ಗುಂಡು ಹಾರಿಸಿದರು

   

ನೈರೋಬಿ(ಕೆನ್ಯಾ): ಹೊಸ ತೆರಿಗೆ ಹಾಗೂ ವಿವಾದಾತ್ಮಕ ಹಣಕಾಸು ಮಸೂದೆ ವಿರೋಧಿಸಿ ಕೆನ್ಯಾದಲ್ಲಿ ಪ್ರತಿಭಟನೆ ಮುಂದುವರಿದಿದ್ದು, ಸಂಸತ್‌ ಭವನದ ಕೆಲ ಭಾಗಕ್ಕೆ ಮಂಗಳವಾರ ಬೆಂಕಿ ಬಿದ್ದಿದೆ.

ಸಂಸತ್‌ನೊಳಗೆ ನುಗ್ಗುತ್ತಿದ್ದ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಸಿಡಿಸಿದರು. ಪೊಲೀಸರು ಸಿಡಿಸಿದ ಗುಂಡಿಗೆ ಒಬ್ಬ ವ್ಯಕ್ತಿ ಮೃತಪಟ್ಟಿದ್ಧಾನೆ ಎಂದು ಮಾನವ ಹಕ್ಕುಗಳ ಸಂಘಟನೆ ಆರೋಪಿಸಿದೆ.

ADVERTISEMENT

ದೇಶದ ಹಲವು ಭಾಗಗಳಲ್ಲಿ ಸಹ ಪ್ರತಿಭಟನೆ ನಡೆಯುತ್ತಿದ್ದು, ಗಾಯಗೊಂಡವರಿಗೆ ಚಿಕಿತ್ಸೆ ನೀಡುವುದಕ್ಕಾಗಿ ವಿವಿಧೆಡೆ ತುರ್ತು ಸ್ಪಂದನಾ ಕೇಂದ್ರಗಳನ್ನು ಆರಂಭಿಸಲಾಗಿದೆ.

ಕಳೆದ ವಾರ ನಡೆದ ಪ್ರತಿಭಟನೆ ವೇಳೆ, ಪೊಲೀಸರು ಹಾರಿಸಿದ್ದ ಗುಂಡಿಗೆ ಇಬ್ಬರು ಮೃತಪಟ್ಟಿದ್ದರು.

ಸ್ಯಾನಿಟರಿ ಟವೆಲ್‌ ಮತ್ತು ಡಯಪರ್ಸ್‌ಗಳ ಮೇಲಿನ ತೆರಿಗೆ ಹೆಚ್ಚಳ ಮಾಡಲು ಸರ್ಕಾರ ಮುಂದಾಗಿದೆ. ಇದರ ಜೊತೆಗೆ ಇನ್ನೂ ಹಲವು ಸರಕುಗಳ ಮೇಲಿನ ತೆರಿಗೆ ಹೆಚ್ಚಳಕ್ಕೆ ಅನುವು ಮಾಡಿಕೊಡುವ ಹಣಕಾಸು ಮಸೂದೆ ಮೇಲೆ ಸಂಸತ್‌ನಲ್ಲಿ ಚರ್ಚೆ ನಡೆದಿದ್ದು, ಮಸೂದೆಯನ್ನು ಮತಕ್ಕೆ ಹಾಕಲಾಗಿದೆ.

ಪ್ರಸ್ತಾವಿತ ತೆರಿಗೆಗಳನ್ನು ವಿರೋಧಿಸಿ ಕಳೆದ ಕೆಲ ದಿನಗಳಿಂದಲೂ ಪ್ರತಿಭಟನೆ ನಡೆಯುತ್ತಿದ್ದು, ಮಂಗಳವಾರ ತೀವ್ರಗೊಂಡಿದೆ.

ವಿಡಿಯೊ ಬಿಡುಗಡೆ: ಪೊಲೀಸ್‌ ಅಧಿಕಾರಿಗಳು ಪ್ರತಿಭಟನಕಾರರತ್ತ ಗುಂಡು ಹಾರಿಸುತ್ತಿರುವ  ದೃಶ್ಯಗಳಿರುವ ವಿಡಿಯೊವೊಂದನ್ನು ಕೆನ್ಯಾ ಮಾನವ ಹಕ್ಕುಗಳ ಆಯೋಗವು ‘ಎಕ್ಸ್‌’ ಖಾತೆಯಲ್ಲಿ ಮಂಗಳವಾರ ಹಂಚಿಕೊಂಡಿದೆ.

ಕೆನ್ಯಾ ಅಧ್ಯಕ್ಷ ವಿಲಿಯಮ್ ರುಟೊ ಅವರನ್ನು ಉದ್ದೇಶಿಸಿ, ‘ನೀವು ದಬ್ಬಾಳಿಕೆ ನಡೆಸುತ್ತಿರುವುದನ್ನು ಜಗತ್ತು ನೋಡುತ್ತಿದೆ. ನಿಮ್ಮ ಸರ್ಕಾರ ಕೈಗೊಂಡಿರುವ ಈ ಕ್ರಮ ಪ್ರಜಾಪ್ರಭುತ್ವದ ಮೇಲಿನ ಪ್ರಹಾರವಾಗಿದೆ. ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಗುಂಡಿನ ದಾಳಿಗೆ ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದೂ ‘ಎಕ್ಸ್‌’ನಲ್ಲಿ ಬರೆದಿದ್ದಾರೆ.

‘ನನ್ನ ಆಪ್ತ ಸಹಾಯಕ ಸೇರಿ 50 ಕೆನ್ಯಾ ಪ್ರಜೆಗಳನ್ನು ಅಪಹರಣ ಮಾಡಲಾಗಿದೆ. ಪೊಲೀಸರೇ ಈ ಕೃತ್ಯ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ’ ಎಂದು ಕೆನ್ಯಾ ಲಾ ಸೊಸೈಟಿ ಅಧ್ಯಕ್ಷೆ ಫೇತ್ ಒಧಿಯಾಂಬೊ ಹೇಳಿದ್ದಾರೆ.

‘ಬಹಳಷ್ಟು ಜನ ನಾಪತ್ತೆಯಾಗಿದ್ದು, ಹೊಸ ತೆರಿಗೆಗಳನ್ನು ವಿರೋಧಿಸುತ್ತಿರುವವರೂ ಇವರಲ್ಲಿ ಸೇರಿದ್ದಾರೆ. ಹಲವರನ್ನು ಅವರ ಮನೆ, ಕೆಲಸದ ಸ್ಥಳಗಳು ಹಾಗೂ ಸಾರ್ವಜನಿಕ ಜಾಗಗಗಳಿಂದ ಅಪಹರಿಸಲಾಗಿದೆ’ ಎಂದು ನಾಗರಿಕ ಸಂಘಟನೆಗಳು ಹೇಳಿವೆ.

ಸೂಚನೆ: ಪೊಲೀಸರಿಂದ ಅಪಹರಣಕ್ಕೆ ಒಳಗಾಗಿದ್ದಾರೆ ಎನ್ನಲಾಗುತ್ತಿರುವವರ ಕುರಿತು ಮಾಹಿತಿ ಸಲ್ಲಿಸುವಂತೆ ಸಂಸತ್‌ನ ಸ್ಪೀಕರ್ ಮೋಸಸ್ ವೆಟಂಗುಲಾ ಅವರು ಪೊಲೀಸ್‌ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.