ಲಂಡನ್: ಕೋವಿಡ್–19 ಪಿಡುಗಿನ ಸಮಯದಲ್ಲಿನ ನಿರ್ಬಂಧಗಳನ್ನು ಉಲ್ಲಂಘಿಸಿ ಸಂತೋಷಕೂಟಗಳನ್ನು ಮಾಡಿದ್ದ ಬಗ್ಗೆ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಉದ್ದೇಶಪೂರ್ವಕವಾಗಿ ಸಂಸತ್ತನ್ನು ತಪ್ಪು ದಾರಿಗೆಳೆದಿದ್ದರು ಎಂದು ಹಕ್ಕುಬಾಧ್ಯತಾ ಸಮಿತಿ ಗುರುವಾರ ಹೇಳಿದೆ.
ಸಮಿತಿಯು ಜಾನ್ಸನ್ ವಿರುದ್ಧದ ಆರೋಪಗಳಿಗೆ ಸಂಬಂಧಿಸಿ ನಡೆಸಿದ್ದ ತನಿಖೆಯ ವರದಿಯಲ್ಲಿ ಈ ಅಂಶವನ್ನು ಉಲ್ಲೇಖಿಸಿದೆ.
ಕೋವಿಡ್ ನಿರ್ಬಂಧಗಳನ್ನು ಉಲ್ಲಂಘಿಸಿ ತಮ್ಮ ಕಚೇರಿಯಲ್ಲಿ ಜಾನ್ಸನ್ ಅವರು ಸಂತೋಷಕೂಟ ನಡೆಸಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದನ್ನು ‘ಪಾರ್ಟಿಗೇಟ್ ಹಗರಣ’ ಎಂದೇ ಕರೆಯಲಾಗುತ್ತಿದೆ.
ಜಾನ್ಸನ್ ಅವರು ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲ ದಿನಗಳ ನಂತರ ಸಮಿತಿಯು ತನ್ನ ವರದಿಯನ್ನು ಬಿಡುಗಡೆ ಮಾಡಿದೆ. ಇನ್ನೊಂದೆಡೆ, ‘ಸಮಿತಿ ಸದಸ್ಯರು ನನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ’ ಎಂದು ಜಾನ್ಸನ್ ಟೀಕಿಸಿದ್ದಾರೆ.
‘ಜಾನ್ಸನ್ ಅವರು ಸದನದ ನಿಯಮಗಳನ್ನು ಉಲ್ಲಂಘಿಸಿದ್ದಾರೆ’ ಎಂದು ಹೇಳಿರುವ ಸಮಿತಿ, ‘ಅವರು ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದಲ್ಲಿ 90 ದಿನಗಳ ಕಾಲ ಅವರನ್ನು ಸಂಸತ್‌ನಿಂದ ಅಮಾನತು ಮಾಡಬೇಕು’ ಎಂದು ಶಿಫಾರಸು ಮಾಡಿತ್ತು.
ವರದಿಯಲ್ಲಿನ ಅಂಶಗಳ ಬಗ್ಗೆ ಮಾಹಿತಿ ತಿಳಿದ ಬೆನ್ನಲ್ಲೇ, ಜಾನ್ಸನ್ ಅವರು ಕಳೆದ ವಾರ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.