ಜೆರುಸಲೇಮ್: ಗೂಢಚಾರಿಕೆ ತಂತ್ರಾಂಶ ಅಭಿವೃದ್ಧಿಪಡಿಸಿರುವ ಕಂಪನಿ, ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್‌ನ ನಿಯೋಜಿತ ಸಿಇಒ ಐಸಾಕ್ ಬೆನ್‌ಬೆನಿಸ್ಟಿ ಅವರು ಅಧಿಕಾರ ಸ್ವೀಕರಿಸುವ ಮುನ್ನವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಎನ್‌ಎಸ್‌ಒ ಗ್ರೂಪ್ ಅನ್ನು ಅಮೆರಿಕ ಕಪ್ಪುಪಟ್ಟಿಗೆ ಸೇರಿಸಿದ ಕೆಲವೇ ದಿನಗಳ ನಂತರ ಈ ಬೆಳವಣಿಗೆ ನಡೆದಿದೆ. ತನ್ನ ವಿದೇಶಾಂಗ ನೀತಿ ಹಾಗೂ ರಾಷ್ಟ್ರೀಯ ಭದ್ರತೆ ಹಿತಾಸಕ್ತಿಗಳ ವಿರುದ್ಧವಾಗಿ ಕಂಪನಿ ನಡೆದುಕೊಂಡಿದ್ದಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕ ಸರ್ಕಾರ ಹೇಳಿದೆ.
ಐಸಾಕ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕುರಿತು ಸ್ಥಳೀಯ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿದ್ದು, ಕಂಪನಿಯ ವಕ್ತಾರರೊಬ್ಬರು ಸಹ ಇದನ್ನು ಖಚಿತಪಡಿಸಿದ್ದಾರೆ.
ಐಸಾಕ್ ಅವರು ಕಳೆದ ಆಗಸ್ಟ್‌ನಲ್ಲಿ ಕಂಪನಿ ಸೇರಿದ್ದರು.ಅಕ್ಟೋಬರ್ 31ರಂದು ಅವರನ್ನು ಸಿಇಒ ಆಗಿ ನೇಮಕ ಮಾಡಿರುವುದಾಗಿ ಕಂಪನಿ ತಿಳಿಸಿತ್ತು.
ಎನ್‌ಎಸ್‌ಒ ಗ್ರೂಪ್ ‘ಪೆಗಾಸಸ್’ ಎಂಬ ಗೂಢಚಾರಿಕೆ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು, ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಇದರ ದುರ್ಬಳಕೆಯಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದು, ವಿವಾದಕ್ಕೆ ಕಾರಣವಾಗಿದೆ.
ಕಂಪನಿಯನ್ನು ಅಮೆರಿಕ ಕಪ್ಪುಪಟ್ಟಿಗೆ ಸೇರಿಸಿರುವ ವಿಷಯಕ್ಕೆ ಸಂಬಂಧಿಸಿ ಇಸ್ರೇಲ್ ಸರ್ಕಾರ ಅಂತರ ಕಾಯ್ದುಕೊಂಡಿದೆ. ‘ಎನ್‌ಎಸ್‌ಒ ಗ್ರೂಪ್ ಖಾಸಗಿ ಕಂಪನಿಯಾಗಿದ್ದು, ಸರ್ಕಾರದ ವಿದೇಶಾಂಗ ನೀತಿಗಳಿಗೂ, ಕಂಪನಿಗೆ ಸಂಬಂಧಿಸಿದ ಬೆಳವಣಿಗೆಗಳಿಗೂ ಸಂಬಂಧ ಇಲ್ಲ’ ಎಂದು ವಿದೇಶಾಂಗ ಸಚಿವ ಯೈರ್ ಲೇಪಿಡ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.