ವಾಷಿಂಗ್ಟನ್/ಬೀಜಿಂಗ್: ಅಮೆರಿಕದ ವಾಯು ಪ್ರದೇಶದಲ್ಲಿ ಶಂಕಿತ ಬೇಹುಗಾರಿಕೆಯ ಚೀನಿ ಬಲೂನು ಒಂದೆರಡು ದಿನಗಳವರೆಗೆ ಹಾರಾಟ ನಡೆಸಿದೆ ಎಂದು ಪೆಂಟಗನ್ ವರದಿ ಹೇಳಿದೆ.
‘ಶಂಕಿತ ಬೇಹುಗಾರಿಕೆ ಬಲೂನ್ ಅನ್ನು ಪತ್ತೆ ಹಚ್ಚಿದರೂ ಅದನ್ನು ಹೊಡೆದು ಉರುಳಿಸಲಿಲ್ಲ. ಬಲೂನ್‌ಗೆ ಶೂಟ್ ಮಾಡಿದರೆ ಅದರ ಅವಶೇಷಗಳಿಂದ ನೆಲದ ಮೇಲಿದ್ದವರಿಗೆ ಹಾನಿಯಾಗುತ್ತಿತ್ತು. ಆ ಕಾರಣಕ್ಕಾಗಿ ಶೂಟ್ ಮಾಡದಿರಲು ರಕ್ಷಣಾ ಸಚಿವಾಲಯ ಪೆಂಟಗನ್ ನಿರ್ಧರಿಸಿತು’ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
‘ರಹಸ್ಯವಾಗಿ ಮಾಹಿತಿಗಳನ್ನು ಸಂಗ್ರಹಿಸಲು ಚೀನಿ ಬಲೂನು ಅತ್ಯಂತ ಸೂಕ್ಷ್ಮ ಸ್ಥಳಗಳ ಮೇಲೆ ಹಾರಾಟ ನಡೆಸಿದೆ. ದೇಶದಲ್ಲಿ ಅಣ್ವಸ್ತ್ರ ಕ್ಷಿಪಣಿಗಳನ್ನು ನೆಲೆಗೊಳಿಸಿರುವ ಪ್ರಮುಖ ಮೂರು ಸ್ಥಳಗಳಲ್ಲಿ ಒಂದೆನಿಸಿದ ಮೊಂಟಾನಾದ ವಾಯುಪ್ರದೇಶದಲ್ಲಿ ಬಲೂನು ಹಾರಾಟ ನಡೆಸಿರುವುದು ಪತ್ತೆಯಾಗಿದೆ. ಮೊಂಟೊನಾದಲ್ಲಿ ಮಾಲ್ಮ್‌ಸ್ಟಾರ್ಮ್ ವಾಯು ಪಡೆಯ ನೆಲೆಯೂ ಇದೆ. ಪತ್ತೆಹಚ್ಚಲಾದ ಬಲೂನು ಚೀನಾದ ಹೈ ಆಲ್ಟಿಟ್ಯೂಡ್ ಬಲೂನು ಎನ್ನುವ ಬಗ್ಗೆ ಅಮೆರಿಕಕ್ಕೆ ಬಲವಾದ ವಿಶ್ವಾಸವಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ, ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಪೆಂಟಗನ್ ವರದಿಗಾರರಿಗೆ ತಿಳಿಸಿದರು.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಚೀನಾ ಪ್ರವಾಸ ಕೈಗೊಳ್ಳುವ ಕೆಲವು ದಿನಗಳ ಮುಂಚಿತವಾಗಿ ಈ ಸಂಗತಿಯನ್ನು ಪೆಂಟಗನ್ ಪ್ರಕಟಿಸಿದೆ. ಇದು ಬ್ಲಿಂಕನ್ ಅವರ ಚೀನಾ ಪ್ರವಾಸದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಪ್ರವಾಸದ ಬಗ್ಗೆ ವಿದೇಶಾಂಗ ಇಲಾಖೆಯೂ ಔಪಚಾರಿಕ ಘೋಷಣೆ ಮಾಡಿಲ್ಲ.
‘ಬಲೂನ್ ಪತ್ತೆಯಾದ ತಕ್ಷಣವೇ ಹೊಡೆದುರುಳಿಸಲು ಆದೇಶ ನೀಡಿ, ಎಫ್–22 ಸೇರಿ ಯುದ್ಧ ವಿಮಾನಗಳನ್ನು ಸಜ್ಜುಗೊಳಿಸಲಾಗಿತ್ತು. ಬಲೂನ್ ಜನದಟ್ಟಣೆಯ ಮೊಂಟಾನಾದ ವಾಯು ಪ್ರದೇಶದಲ್ಲಿತ್ತು. ಅದರಲ್ಲಿ ಏನಿದೆ ಎನ್ನುವುದೂ ಸ್ಪಷ್ಟವಾಗಿರಲಿಲ್ಲ. ಅದನ್ನು ಹೊಡೆದುರುಳಿಸಿದರೆ ಅದರ ಅವಶೇಷಗಳಿಂದ ಜನರಿಗೆ ತೊಂದರೆ ಆಗುತ್ತದೆ ಎನ್ನುವ ಕಾರಣಕ್ಕಾಗಿ ಪೆಂಟಗನ್ ಬಲೂನ್ ಹೊಡೆದುರುಳಿಸದಿರಲು ಸಲಹೆ ನೀಡಿತು’ ಎಂದು ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ವಾಯು ಪ್ರದೇಶದಲ್ಲಿ ಹಾರಾಡುತ್ತಿದ್ದ ಬಿಳಿ ಬಣ್ಣದ ದೊಡ್ಡ ಬಲೂನ್‌ನ ಛಾಯಾಚಿತ್ರವನ್ನು ‘ದಿ ಬಿಲ್ಲಿಂಗ್ಸ್ ಗೆಜೆಟ್’ ಛಾಯಾಗ್ರಾಹಕ ಲ್ಯಾರಿ ಮೇಯರ್ ಸೆರೆ ಹಿಡಿದಿದ್ದಾರೆ. ಶಂಕಿತ ಬೇಹುಗಾರಿಕೆ ಬಲೂನ್ ಬಗ್ಗೆ ‘ಎನ್‌ಬಿಸಿ ನ್ಯೂಸ್’ ಮೊದಲು ವರದಿ ಮಾಡಿದೆ.
ಪೆಂಟಗನ್ ವರದಿ ಪರಿಶೀಲಿಸುತ್ತೇವೆ: ಚೀನಾ
ಅಮೆರಿಕದ ವಾಯು ಪ್ರದೇಶದಲ್ಲಿ ಬೇಹುಗಾರಿಕೆ ಬಲೂನು ಹಾರಾಟ ನಡೆಸಿರುವುದಾಗಿ ಪೆಂಟಗನ್ ನೀಡಿರುವ ವರದಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ಚೀನಾ ಶುಕ್ರವಾರ ಹೇಳಿದೆ.
‘ಯಾವುದೇ ಸಾರ್ವಭೌಮ ದೇಶದ ಪ್ರದೇಶ ಮತ್ತು ವಾಯುಪ್ರದೇಶ ಉಲ್ಲಂಘಿಸುವ ಉದ್ದೇಶವಿಲ್ಲ. ಈ ವಿಚಾರದಲ್ಲಿ ಶಾಂತತೆ ಕಾಯ್ದುಕೊಳ್ಳಬೇಕು’ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೋ ನಿಂಜ್ ದೈನಂದಿನ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಅವರು ಮುಂದಿನ ವಾರ ಕೈಗೊಂಡಿರುವ ಉದ್ದೇಶಿತ ಚೀನಾ ಪ್ರವಾಸವು ನಿಗದಿಯಂತೆ ಮುಂದುವರಿಯುತ್ತದೆಯೇ ಎಂಬುದರ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಮಾವೋ ನಿಂಜ್ ಪ್ರತಿಕ್ರಿಯಿಸಿದರು.
‘ಶಂಕಿತ ಬೇಹುಗಾರಿಕೆ ಬಲೂನು ಹಾರಾಟದ ಬಗ್ಗೆ ಸತ್ಯಾಂಶ ತಿಳಿಯುವವರೆಗೆ ರಾಜಕಾರಣಿಗಳು ಮತ್ತು ಸಾರ್ವಜನಿಕರು ಈ ಕುರಿತು ಯಾವುದೇ ತೀರ್ಮಾನಕ್ಕೆ ಬರಬಾರದು. ಉಭಯ ರಾಷ್ಟ್ರಗಳು ಇದನ್ನು ಶಾಂತವಾಗಿ ಮತ್ತು ಎಚ್ಚರಿಕೆಯಿಂದ ಒಟ್ಟಿಗೆ ನಿಭಾಯಿಸಬಹುದೆಂದು ಭಾವಿಸುತ್ತೇವೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.