ADVERTISEMENT

ಮಂಗಳೂರು ಕಡೆಗೆ ಹೊರಟಿದ್ದ ಹಡಗಿನ ಮೇಲೆ ಡ್ರೋನ್ ದಾಳಿ ನಡೆಸಿದ್ದು ಇರಾನ್: ಪೆಂಟಗನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಡಿಸೆಂಬರ್ 2023, 3:52 IST
Last Updated 24 ಡಿಸೆಂಬರ್ 2023, 3:52 IST
<div class="paragraphs"><p>ವ್ಯಾಪಾರಿ ಹಡಗು ಎಂವಿ ಕೆಮ್ ಪ್ಲುಟೊ</p></div>

ವ್ಯಾಪಾರಿ ಹಡಗು ಎಂವಿ ಕೆಮ್ ಪ್ಲುಟೊ

   

(ಚಿತ್ರ ಕೃಪೆ  ಎಎನ್‌ಐ)

ವಾಷಿಂಗ್ಟನ್: ಸೌದಿ ಅರೇಬಿಯಾದಿಂದ ಹೊರಟು ಮಂಗಳೂರು ಕಡೆಗೆ ಬರುತ್ತಿದ್ದ ಕಚ್ಚಾ ತೈಲದ ಹಡಗಿನ ಮೇಲೆ ಶನಿವಾರ ಡ್ರೋನ್ ದಾಳಿ ನಡೆಸಿದ್ದು, ಇರಾನ್‌ ಎಂದು ಅಮೆರಿಕದ ಭದ್ರತಾ ಸಂಸ್ಥೆ ಪೆಂಟಗನ್‌ ಹೇಳಿದೆ.

ADVERTISEMENT

ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿಯ ನಂತರ ಹೆಚ್ಚುತ್ತಿರುವ ಪ್ರಾದೇಶಿಕ ಉದ್ವಿಗ್ನತೆಯ ನಡುವೆ ಈ ಘಟನೆ ನಡೆದಿದೆ. 2021ರಿಂದ ವಾಣಿಜ್ಯ ಹಡಗುಗಳ ಮೇಲೆ ಇರಾನಿನ 7ನೇ ದಾಳಿ ಇದಾಗಿದೆ ಎಂದು ಪೆಂಟಗನ್ ವಕ್ತಾರರು ತಿಳಿಸಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.

20 ಭಾರತೀಯ ಮತ್ತು ಓರ್ವ ವಿಯೆಟ್ನಾಂ ಸಿಬ್ಬಂದಿಯೊಂದಿಗೆ ಭಾರತಕ್ಕೆ ಬರುತ್ತಿದ್ದ ಎಂವಿ ಕೆಮ್ ಪ್ಲುಟೊ ಎಂಬ ವ್ಯಾಪಾರಿ ಹಡಗಿನ ಮೇಲೆ ನಿನ್ನೆ ಡ್ರೋನ್‌ ದಾಳಿ ನಡೆದಿತ್ತು. ಈ ವೇಳೆ ಬೆಂಕಿ ಹೊತ್ತಿಕೊಂಡಿತ್ತು. ಈ ವೇಳೆ ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ನೆರವಿಗೆ ಧಾವಿಸಿದೆ ಎಂದು ಐಸಿಜಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಈ ವ್ಯಾಪಾರಿ ಹಡಗು ಡಿಸೆಂಬರ್ 19 ರಂದು ಯುಎಇಯಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಿತು. ಡಿಸೆಂಬರ್ 25 ರಂದು ನವ ಮಂಗಳೂರು ಬಂದರಿಗೆ ತಲುಪಬೇಕಿತ್ತು ಎಂದು ವರದಿಯಾಗಿದೆ.

ಡ್ರೋನ್ ದಾಳಿಯಿಂದ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸದ್ಯ ‌ಬೆಂಕಿಯನ್ನು ನಂದಿಸಲಾಗಿದ್ದರೂ ಹಡಗಿನ ಒಟ್ಟಾರೆ ಕಾರ್ಯನಿರ್ವಹಣೆಗೆ ತೊಡಕಾಗಿದೆ. ಹಡಗಿನಲ್ಲಿದ್ದ ಎಲ್ಲ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಗುಜರಾತ್‌ನ ವೆರಾವಲ್ ಕರಾವಳಿಯಿಂದ ಸುಮಾರು 200 ನಾಟಿಕಲ್ ಮೈಲುಗಳಷ್ಟು ದೂರದ ಅರಬ್ಬಿ ಸಮುದ್ರದಲ್ಲಿ ಶನಿವಾರ ಸುಮಾರು 20 ಭಾರತೀಯ ಸಿಬ್ಬಂದಿಯಿದ್ದ ಕಚ್ಚಾ ತೈಲದ ಹಡಗಿನ ಮೇಲೆ ಸ್ಥಳೀಯ ಕಾಲಮಾನ ಬೆಳಗ್ಗೆ 10 ಗಂಟೆಯ ಸುಮಾರಿಗೆ ಡ್ರೋನ್ ದಾಳಿ ನಡೆದಿತ್ತು. ಜಪಾನ್‌ ಒಡೆತನದ ಹಡಗು ಇದಾಗಿದ್ದು, ದಾಳಿಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಪೆಂಟಗನ್ ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ.

ಹಡಗು ಮುಂಬೈಗೆ ಪ್ರವೇಶಿಸುವ ಸಾಧ್ಯತೆಯಿದೆ. ಸ್ಟೀರಿಂಗ್ ಸಮಸ್ಯೆಗಳ ಕಾರಣ ಬೆಂಗಾವಲು ಸಹಾಯವನ್ನು ಕೋರಿದೆ. ಭಾರತೀಯ ವಿಶೇಷ ಆರ್ಥಿಕ ವಲಯದಲ್ಲಿ ಗಸ್ತು ತಿರುಗುತ್ತಿದ್ದ ಕೋಸ್ಟ್ ಗಾರ್ಡ್ ಹಡಗು ಐಸಿಜಿಎಸ್ ವಿಕ್ರಮ್‌ಗೆ ಸಂಕಷ್ಟದಲ್ಲಿರುವ ವ್ಯಾಪಾರಿ ಹಡಗಿನ ಕಡೆಗೆ ಹೋಗುವಂತೆ ಸೂಚಿಸಿದೆ. ಅಲ್ಲದೇ ತೊಂದರೆಯಲ್ಲಿರುವ ಹಡಗಿಗೆ ನೆರವು ನೀಡುವಂತೆ ಕೋಸ್ಟ್ ಗಾರ್ಡ್ ನೌಕೆ ಆ ಪ್ರದೇಶದಲ್ಲಿನ ಎಲ್ಲಾ ಹಡಗುಗಳಿಗೆ ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.