ಲಂಡನ್: ‘ಕೋವಿಡ್ ಸೋಂಕಿನ ಅಲ್ಫಾ ತಳಿಗೆ ಹೋಲಿಸಿದರೆ ಫೈಝರ್ ಮತ್ತು ಆಸ್ಟ್ರಾಜೆನೆಕಾ ಲಸಿಕೆಗಳು ಡೆಲ್ಟಾ ರೂಪಾಂತರ ತಳಿ ವಿರುದ್ಧ ಕಡಿಮೆ ಪರಿಣಾಮಕಾರಿಯಾಗಿವೆ’ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನವೊಂದು ಹೇಳಿದೆ.
‘ಆದರೂ, ಫೈಝರ್–ಬಯೊಎನ್‌ಟೆಕ್ ಲಸಿಕೆ ಮತ್ತು ಆಕ್ಸ್‌ಫರ್ಡ್–ಅಸ್ಟ್ರಾಜೆನೆಕಾ (ಕೋವಿಶೀಲ್ಡ್) ಲಸಿಕೆಯು ಡೆಲ್ಟಾ ತಳಿಯ ವಿರುದ್ಧ ಉತ್ತಮ ರಕ್ಷಣೆ ನೀಡುತ್ತದೆ’ಎಂದು ಸಂಶೋಧಕರು ತಿಳಿಸಿದ್ದಾರೆ.
‘ಕಳೆದ ವರ್ಷ ಡಿಸೆಂಬರ್ 1 ರಂದು 18 ವರ್ಷ ಮೇಲ್ಪಟ್ಟ 384,543 ವ್ಯಕ್ತಿಗಳ ಮೂಗು ಮತ್ತು ಗಂಟಲಿನ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಿಂದ ದೊರೆತ 25,80,021 ಪರೀಕ್ಷಾ ವರದಿಗಳನ್ನು ವಿಶ್ಲೇಷಿಸಲಾಗಿತ್ತು. ಈ ವರ್ಷ ಮೇ 21 ರಿಂದ ಆಗಸ್ಟ್ 1ರೊಳಗೆ 358,983 ಅಭ್ಯರ್ಥಿಗಳಿಂದ ಸಂಗ್ರಹಿಸಿದ ಮಾದರಿಗಳಿಂದ ಪಡೆದ 811,624 ಪರೀಕ್ಷಾ ವರದಿಗಳನ್ನು ಪರಿಶೀಲಿಸಲಾಯಿತು’ ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ.
ಈ ಅಧ್ಯಯನದಲ್ಲಿ ಆಫೀಸ್ ಆಫ್ ನ್ಯಾಷನಲ್ ಸ್ಟ್ಯಾಟಿಸ್ಟಿಕ್ಸ್ (ಒಎನ್ಎಸ್) ಮತ್ತು ಬ್ರಿಟನ್‌ನ ಆರೋಗ್ಯ ಮತ್ತು ಸಾಮಾಜಿಕ ಆರೈಕೆ ಇಲಾಖೆಯ (ಡಿಎಚ್‌ಎಸ್‌ಸಿ) ಸಂಶೋಧಕರೂ ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.