ಲಂಡನ್: ‘ಫೈಝರ್ ಮತ್ತು ಆಸ್ಟ್ರಾಜೆನೆಕಾ ಕೋವಿಡ್ ಲಸಿಕೆಗಳ ಪ್ರತಿಕಾಯ ಸಾಮರ್ಥ್ಯವು ರೋಗ ನಿರೋಧಕ ಶಕ್ತಿಯು ಪೂರ್ಣಗೊಂಡ ಆರು ವಾರಗಳ ತರುವಾಯ ಕುಗ್ಗಲು ಆರಂಭವಾಗಲಿದ್ದು, 10 ವಾರಗಳಲ್ಲಿ ಶೇ 50ಕ್ಕಿಂತಲೂ ಹೆಚ್ಚು ಕಡಿಮೆ ಆಗಲಿದೆ’ ಎಂದು ಲಂಡನ್‌ನ ಲ್ಯಾನ್ಸೆಂಟ್ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನ ವರದಿ ತಿಳಿಸಿದೆ.
ಲಂಡನ್‌ನ ಯೂನಿವರ್ಸಿಟಿ ಕಾಲೇಜಿನ (ಯುಸಿಎಲ್) ಸಂಶೋಧಕರ ಪ್ರಕಾರ, ಈ ಪ್ರಮಾಣದಲ್ಲಿ ಪ್ರತಿಕಾಯ ಸಾಮರ್ಥ್ಯ ಕುಗ್ಗಿದರೆ, ಲಸಿಕೆಯ ರಕ್ಷಣಾತ್ಮಕ ಶಕ್ತಿ ನೂತನ ರೂಪಾಂತರ ತಳಿಗಳ ವಿರುದ್ಧವೂ ಕುಂದಬಹುದು ಎಂದಿದ್ದಾರೆ.
ಆದರೆ, ಈ ಪ್ರತಿಕಾಯಗಳ ಸಾಮರ್ಥ್ಯ ಎಷ್ಟು ಅವಧಿಯಲ್ಲಿ ಕುಂದಲಿದೆ ಎಂಬುದನ್ನು ಹೇಳಲಾಗದು ಎಂದು ಅಧ್ಯಯನ ವರದಿ ಹೇಳಿದೆ.
ಅಲ್ಲದೆ, ಯುಸಿಎಲ್‌ನ ಸೋಂಕು ಅಧ್ಯಯನ ವರದಿಯು, ಎರಡೂ ಡೋಸ್ ಲಸಿಕೆ ಪಡೆದ ನಂತರ ಪ್ರತಿಕಾಯ ಸಾಮರ್ಥ್ಯವು ಫೈಝರ್ ಲಸಿಕೆಯಲ್ಲಿ, ಆಸ್ಟ್ರಾಜೆನೆಕಾ ಲಸಿಕೆಗಿಂತಲೂ ಹೆಚ್ಚಿರುತ್ತದೆ. ಸೋಂಕು ಪೀಡಿತರಿಗಿಂತಲೂ ಲಸಿಕೆ ಪಡೆದವರಲ್ಲಿ ಈ ಶಕ್ತಿಯು ಇನ್ನೂ ಹೆಚ್ಚಾಗಿರುತ್ತದೆ ಎಂದು ಉಲ್ಲೇಖಿಸಿದೆ.
ಈ ಎರಡೂ ಲಸಿಕೆಗಳಲ್ಲಿ ಪ್ರತಿಕಾಯ ಶಕ್ತಿಯು ಆರಂಭದಲ್ಲಿ ಉನ್ನತ ಮಟ್ಟದಲ್ಲಿಯೇ ಇರುತ್ತದೆ. ಇದೇ ಕಾರಣದಿಂದ ಕೋವಿಡ್ ವಿರುದ್ಧ ರಕ್ಷಣೆಯಲ್ಲಿ ಇವುಗಳು ಮಹತ್ವದ್ದಾಗಿವೆ ಎಂದು ಯುಸಿಎಲ್‌ನ ಮಧುಮಿತಾ ಶ್ರೋತಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.