ADVERTISEMENT

ಇಡೀ ವಿಶ್ವದ ಮನ ಕಲಕುತ್ತಿದೆ ತಂದೆ ಮಗಳ ಸಾವಿನ ದಾರುಣ ದೃಶ್ಯ 

ಏಜೆನ್ಸೀಸ್
Published 26 ಜೂನ್ 2019, 17:05 IST
Last Updated 26 ಜೂನ್ 2019, 17:05 IST
   

ಸಿಯುಡಾಡ್ ವಿಕ್ಟೋರಿಯಾ (ಮೆಕ್ಸಿಕೊ): ಮೆಕ್ಸಿಕೊದ ರಿಯೋ ಗ್ರಾಂಡ್‌ ನದಿಯನ್ನು ಈಜಿ ಅಮೆರಿಕಕ್ಕೆ ವಲಸೆ ಹೋಗಲೆತ್ನಿಸಿದ ಸಾಲ್ವಡಾರ್‌ನ ವ್ಯಕ್ತಿ ಮತ್ತು ಆತನ ಎರಡು ವರ್ಷದ ಹೆಣ್ಣು ಮಗಳು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಇಬ್ಬರ ದೇಹಗಳೂ ನದಿಯತೀರದಲ್ಲಿ ಪತ್ತೆಯಾಗಿದ್ದು, ಆ ದೃಶ್ಯ ಸದ್ಯ ಇಡೀ ಜಗತ್ತಿನ ಮನ ಕಲಕಿದೆ. ಈ ನಡುವೆ ವಲಸಿಗರು ಎದುರಿಸುತ್ತಿರುವ ಅಪಾಯಗಳ ಬಗ್ಗೆ ನಾಗರಿಕ ಸಮಾಜ ಕಳವಳ ವ್ಯಕ್ತಪಡಿಸಿದ್ದು, ಮಕ್ಸಿಕೋ ಸರ್ಕಾರದ ವಿರುದ್ಧ ಆಕ್ರೋಶವೂ ವ್ಯಕ್ತವಾಗಿದೆ.

ಏಲ್‌ ಸಾಲ್ವಡಾರ್‌ನ 25 ವರ್ಷದ ಆಸ್ಕರ್‌ ಮಾರ್ಟೀನ್ಸ್‌ ರೆಮಿರೇಜ್‌ ತನ್ನ 21ರ ಪ್ರಾಯದ ಪತ್ನಿ ಮತ್ತು 2 ವರ್ಷದ ಮಗುವಿನೊಂದಿಗೆ ದೇಶ ತೊರೆದು ಮೆಕ್ಸಿಕೊ ಗಡಿ ಮೂಲಕ ಅಮೆರಿಕದತ್ತ ವಲಸೆ ಹೋಗಲು ನಿರ್ಧರಿಸಿದ್ದ. ಆಗ ಈ ದುರಂತ ಸಂಭವಿಸಿದೆ ಎಂದು ಮೆಕ್ಸಿಕೊ ನ್ಯಾಯಾಲಯದ ವರದಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ.

ರೆಮಿರೆಜ್‌ ತನ್ನ ಎರಡು ವರ್ಷದ ಮಗಳನ್ನು ಬೆನ್ನಿಗೆ ಕಟ್ಟಿಕೊಂಡು ಮೆಕ್ಸಿಕೊದ ರಿಯೋ ಗ್ರಾಂಡ್‌ ನದಿಯನ್ನು ಈಜಿ ಅಮೆರಿಕ ತಲುಪುವ ವಿಫಲ ಪ್ರಯತ್ನ ನಡೆಸಿದ್ದಾನೆ. ನದಿಯ ಪ್ರವಾಹಕ್ಕೆ ಸಿಲುಕಿ ಆತ ತನ್ನ ಮಗಳೊಂದಿಗೆ ಕೊಚ್ಚಿ ಹೋಗಿದ್ದಾನೆ. ಅದೃಷ್ಟವಶಾತ್‌ ರೆಮಿರೆಜ್‌ ಪತ್ನಿ ಘಟನೆಯಲ್ಲಿ ಬುದುಕುಳಿದಿದ್ದಾರೆ.

ADVERTISEMENT

ನದಿಯಲ್ಲಿ ಕೊಚ್ಚಿ ಹೋಗಿದ್ದ ರೆಮಿರೆಜ್‌ ಮತ್ತು ಮಗಳ ಮೃತ ದೇಹ ಮೆಕ್ಸಿಕೊದತಮೌಲಿಪಾಸ್ ರಾಜ್ಯದ ಮಟಮೊರಸ್‌ ಎಂಬಲ್ಲಿ ಪತ್ತೆಯಾಗಿವೆ. ಮಗು ರೆಮಿರೆಜ್‌ನ ಬೆನ್ನಿಗೆ ಕಟ್ಟಿದ ಸ್ಥಿತಿಯಲ್ಲೇ ಇತ್ತು. ಇಬ್ಬರ ಮೃತದೇಹಗಳೂ ತಲೆಕೆಳಕಾದ ಸ್ಥಿತಿಯಲ್ಲಿ ನದಿಯ ತೀರದಲ್ಲಿ ಒಟ್ಟಿಗೆ ಸಿಕ್ಕಿದೆ. ಈ ದಾರುಣ ದೃಶ್ಯ ಈಗ ಇಡೀ ಜಗತ್ತಿನ ಮನ ಕಲಕುವಂತೆ ಮಾಡಿದೆ.

ಇತ್ತೀಚೆಗೆ ಮೆಕ್ಸಿಕೊ ಗಡಿಯಲ್ಲಿ ಸಂಭವಿಸುತ್ತಿರುವ ವಲಸಿಗರ ಸಾವು ಪ್ರಕರಣಗಳು ಅಲ್ಲಿನ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿವೆ. ಕಳೆದ ವರ್ಷ ಮೆಕ್ಸಿಕೊದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಎಡಪಂಥೀಯ ವಿಚಾರಧಾರೆಯ ಲೋಪೆಜ್‌ ಬಬ್ರಡಾರ್‌ ಅವರು ವಲಸಿಗರ ಹಕ್ಕುಗಳ ರಕ್ಷಣೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.