ರಿಯಾದ್/ಮೀನಾ: ಈ ಸಲದ ಹಜ್ ವಾರ್ಷಿಕ ಯಾತ್ರೆ ಸಂದರ್ಭದಲ್ಲಿ ಅಧಿಕ ತಾಪಮಾನದಿಂದ 900ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ವಿವಿಧ ದೇಶಗಳ ವಿದೇಶಾಂಗ ಸಚಿವಾಲಯಗಳು ತಿಳಿಸಿವೆ.
‘ಹಜ್ ಯಾತ್ರೆಯಲ್ಲಿ 900 ಮಂದಿ ಮೃತಪಟ್ಟಿದ್ದಾರೆ’ ಎಂದು ರಾಯಭಾರಿಯೊಬ್ಬರು ತಿಳಿಸಿದ್ದಾರೆ ಎಂದು ಎಎಫ್‌ಪಿ ಸುದ್ದಿಸಂಸ್ಥೆ ಮಂಗಳವಾರ ತಿಳಿಸಿದೆ. ತಾಪಮಾನ ಹಾಗೂ ವಿವಿಧ ಕಾರಣಗಳಿಂದ 323 ಮಂದಿ ಈಜಿಪ್ಟಿ ಯನ್ನರು ಮೃತಪಟ್ಟಿದ್ದಾರೆ ಎಂದು ಇಬ್ಬರು ಅರಬ್ ರಾಯಭಾರಿ ಹೇಳಿಕೆ ಆಧರಿಸಿ ಖಚಿತಪಡಿಸಿದೆ.
ಸಾವಿನ ಸಂಖ್ಯೆ ಕುರಿತಂತೆ ರಾಯಿಟರ್ಸ್ ಖಚಿತ ಪಡಿಸಿಲ್ಲ. ಕೇರಳದ 13 ಮಂದಿ ಸಾವಿಗೀಡಾಗಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ತಿಳಿಸಿದೆ. ಕಾಲ್ತುಳಿತ, ಟೆಂಟ್‌ಗಳಲ್ಲಿ ಬೆಂಕಿ ಹೊತ್ತಿಕೊಂಡ ಪ್ರಕರಣ, ಇತರೆ ಅಪಘಾತ ಕಾರಣದಿಂದ ಕಳೆದ 30 ವರ್ಷಗಳಿಂದ ಹಜ್ ಯಾತ್ರೆ ವೇಳೆ ನೂರಾರು ಮಂದಿ ಸಾವಿಗೀಡಾಗಿದ್ದಾರೆ.
ಮೆಕ್ಕಾದ ಬೃಹತ್ ಮಸೀದಿ ಆವರಣದಲ್ಲಿ ಸೋಮವಾರ 51.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು ಎಂದು ಸೌದಿಯ ಸರ್ಕಾರಿ ಸುದ್ದಿವಾಹಿನಿ ವರದಿ ಮಾಡಿತ್ತು. ಜಾಗತಿಕ ತಾಪಮಾನದಿಂದ ಸೌದಿ ಅರೇಬಿಯಾದಲ್ಲಿ ತಾಪಮಾನ ತೀವ್ರ ಏರಿಕೆಯಾಗಲಿದೆ ಎಂದು ‘ಟ್ರಾವೆಲ್ ಆ್ಯಂಡ್ ಮೆಡಿಸಿನ್’ ನಿಯತಕಾಲಿಕೆಯು 2024ರಲ್ಲಿ ನಡೆಸಿದ ಅಧ್ಯಯನದಲ್ಲಿ ತಿಳಿಸಿತ್ತು.
ಹಜ್ ವೇಳೆ ಟ್ಯುನಿಷಿಯಾದ 35 ಮಂದಿ ಮೃತಪಟ್ಟಿದ್ದರು ಎಂದು ಟ್ಯುನಿಷಿಯನ್ ಸುದ್ದಿಸಂಸ್ಥೆ ತಿಳಿಸಿದೆ. ತಮ್ಮವರ ಕಳೆದುಕೊಂಡವರನ್ನು ಕುಟುಂಬದ ಸದಸ್ಯರು ಆಸ್ಪತ್ರೆಯಲ್ಲಿ ಹುಡುಕಾಡು ತ್ತಿದ್ದ ದೃಶ್ಯ ಕಂಡುಬಂತು.
ವಿವಿಧ ಕಾರಣಗಳಿಂದ ಮೃತಪಟ್ಟಿದ್ದ ಜೋಡಾರ್ನ್‌ನ 41 ಮಂದಿ ಯಾತ್ರಾರ್ಥಿಗಳ ಮೃತದೇಹಗಳ ಅಂತಿಮಸಂಸ್ಕಾರ ನಡೆಸಲು ಅನುಮತಿ ನೀಡಲಾಗಿದೆ ಎಂದು ಜೋರ್ಡಾನ್ ಸರ್ಕಾರ ತಿಳಿಸಿದೆ.
‘ಯಾತ್ರೆ ವೇಳೆ 11 ಮಂದಿ ಇರಾನಿಯನ್ನರು ಮೃತಪಟ್ಟಿದ್ದು, 24 ಮಂದಿ ಆಸ್ಪತ್ರೆಗೆ ದಾಖಲಾ ಗಿದ್ದಾರೆ’ ಎಂದು ಇರಾನ್‌ನ ಸರ್ಕಾರಿ ಸುದ್ದಿಸಂಸ್ಥೆ ‘ಐಆರ್‌ಇನ್’ ತಿಳಿಸಿದೆ. ಸೆನೆಗಲ್‌ನ ಮೂವರು ಮೃತಪಟ್ಟಿದ್ದಾರೆ. ಯಾತ್ರೆ ವೇಳೆ 144 ಮಂದಿ ಇಂಡೋನೇಷ್ಯಾ ನಿವಾಸಿಗಳು ಮೃತಪಟ್ಟಿದ್ದಾರೆ’
ಎಂದು ಇಂಡೋನೇಷ್ಯಾದ ಆರೋಗ್ಯ ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.