ಮುಂಬೈ: ಮಾನವ ಕಳ್ಳಸಾಗಣೆಯ ಶಂಕೆ ಮೇಲೆ ನಾಲ್ಕು ದಿನ ಫ್ರಾನ್ಸ್‌ನ ಪೊಲೀಸರ ವಶದಲ್ಲಿದ್ದ 276 ಪ್ರಯಾಣಿಕರು ಇದ್ದ ವಿಮಾನ ಮಂಗಳವಾರ ನಸುಕಿನಲ್ಲಿ ಮುಂಬೈನಲ್ಲಿ ಬಂದಿಳಿಯಿತು.
ಪ್ಯಾರಿಸ್ ಬಳಿಯ ವಾಟ್ರಿ ವಿಮಾನ ನಿಲ್ದಾಣದಿಂದ ಹೊರಟಿದ್ದ ಏರ್‌ಬಸ್ ಎ340 ಹೆಸರಿನ ವಿಮಾನವು ನಸುಕಿನ 4 ಗಂಟೆಯ ನಂತರ ಮುಂಬೈ ತಲುಪಿತು.
ಅಪ್ರಾಪ್ತ ವಯಸ್ಸಿನವರು ಇಬ್ಬರು ಸೇರಿದಂತೆ 25 ಜನರು ಫ್ರಾನ್ಸ್‌ನಲ್ಲಿ ಆಶ್ರಯ ಕೋರಿ ಉಳಿದಿದ್ದಾರೆ ಎಂದು ಫ್ರಾನ್ಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಮಾನವು ವಾಟ್ರಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅಪ್ರಾಪ್ತ ವಯಸ್ಸಿನ 11 ಮಂದಿ ಸೇರಿ 303 ಭಾರತೀಯ ಪ್ರಯಾಣಿಕರಿದ್ದರು. ಇದರಲ್ಲಿ ಶಂಕಿತ ಇಬ್ಬರನ್ನು ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಸಾಕ್ಷ್ಯಕ್ಕಾಗಿ ಇರಿಸಿಕೊಳ್ಳಲಾಗಿದೆ ಎಂದು ಫ್ರಾನ್ಸ್ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ. ಸ್ವ ಇಚ್ಛೆಯಿಂದ ವಿಮಾನವೇರಿದ್ದಾಗಿ ಪ್ರಯಾಣಿಕರು ಹೇಳಿಕೆ ನೀಡಿದ್ದರಿಂದ ಎಲ್ಲರಿಗೂ ಪ್ರಯಾಣ ಮುಂದುವರಿಸಲು ಅನುಮತಿಸಲಾಯಿತು ಎಂದು ಫ್ರಾನ್ಸ್ ನ್ಯಾಯಾಂಗ ಮೂಲಗಳು ಹೇಳಿವೆ.
ರೊಮಾನಿಯಾದ ಚಾರ್ಟರ್ ಕಂಪನಿ ಲೆಜೆಂಡ್ ಏರ್‌ಲೈನ್ಸ್ ನಿರ್ವಹಿಸುತ್ತಿದ್ದ ವಿಮಾನವು ಗುರುವಾರ ದುಬೈನಿಂದ ನಿಕರಾಗುವಾಗೆ ಹೊರಟಿತ್ತು. ತಾಂತ್ರಿಕ ಕಾರಣಕ್ಕೆ ವಾಟ್ರಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಮಾನವ ಕಳ್ಳಸಾಗಣೆ ಶಂಕೆ ಬಗ್ಗೆ ಸಿಕ್ಕಿದ ಸುಳಿವು ಆಧರಿಸಿ ಫ್ರಾನ್ಸ್ ಪೊಲೀಸರು ವಿಮಾನವನ್ನು ವಶಕ್ಕೆ ಪಡೆದ್ದಿದ್ದರು. ನ್ಯಾಯಾಂಗ ತನಿಖೆ ಕೈಗೊಳ್ಳಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.