ಇಸ್ಲಾಮಾಬಾದ್: ಪಾಕಿಸ್ತಾನ ಸರ್ಕಾರದಲ್ಲಿ ಅನಿಶ್ಚಿತತೆ ಸೃಷ್ಟಿಯಾಗಲು ವಿದೇಶಿ ಶಕ್ತಿಗಳು ಕಾರಣ ಎಂದು ಆರೋಪಿಸಿರುವ ಪ್ರಧಾನಿ ಇಮ್ರಾನ್ ಖಾನ್, ಅದರ ವಿರುದ್ಧ ಪ್ರತಿಭಟಿಸುವಂತೆ ಯುವಜನತೆಗೆ ಕರೆ ನೀಡಿದ್ದಾರೆ.
ವಿರೋಧ ಪಕ್ಷವು ಈಗಾಗಲೇ ಮಂಡಿಸಿರುವ ಅವಿಶ್ವಾಸ ಗೊತ್ತುವಳಿಯನ್ನು ಇಂದು ಮತಕ್ಕೆ ಹಾಕಲಾಗುತ್ತದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಯಲ್ಲಿ ಇಸ್ಲಾಮಾಬಾದ್‌ನಲ್ಲಿ ಹಿಂಸಾಚಾರ ನಡೆಯುವ ಸಾಧ್ಯತೆ ಇರುವುದಾಗಿ ವರದಿಯಾಗಿದೆ.
ಪಾಕಿಸ್ತಾನದ ಸ್ಥಳೀಯ ಕಾಲಮಾನ 11:30ಕ್ಕೆ ಸಂಸತ್ತಿನ ಕಲಾಪ ಆರಂಭವಾಗಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಇಸ್ಲಾಮಾಬಾದ್‌ನಲ್ಲಿ ನಿಷೇಧಾಜ್ಞೆ (ಸೆಕ್ಷನ್ 144) ಜಾರಿಗೊಳಿಸಲಾಗಿದೆ. ದ್ವಿಚಕ್ರ ವಾಹನದಲ್ಲಿ ಒಬ್ಬರಿಗಿಂತ ಹೆಚ್ಚು ಜನರ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಆಡಳಿತಾರೂಢ ತೆಹ್ರೀಕ್–ಇ–ಇನ್ಸಾಫ್ (ಪಿಟಿಐ) ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಿಂದ ಹಿಂಸಾಚಾರ ನಡೆಯುವ ಸಾಧ್ಯತೆ ಇರುವುದಾಗಿ ಮೂಲಗಳಿಂದ ತಿಳಿದು ಬಂದಿರುವುದಾಗಿ ವರದಿಯಾಗಿದೆ. ವಿರೋಧ ಪಕ್ಷಗಳ ಸದಸ್ಯರನ್ನು ಕಳಮನೆಗೆ ಪ್ರವೇಶಿಸಲು ಅವಕಾಶ ನೀಡದಿರಲು ಪಿಟಿಐ ಮುಖಂಡರು ನಿರ್ಧರಿಸಿದ್ದಾರೆ.
ಬಹುಮತ ಕಳೆದುಕೊಂಡಿದ್ದರೂ 'ಕೊನೆಯ ಎಸೆತದವರೆಗೂ' ಹೋರಾಡುವುದಾಗಿ ಹೇಳಿರುವ ಇಮ್ರಾನ್ ಖಾನ್, ತಮ್ಮ ಬಳಿ 'ಒಂದಕ್ಕಿಂತ ಹೆಚ್ಚು ಯೋಜನೆಗಳಿವೆ' ಎಂದಿದ್ದಾರೆ.
ವಿದೇಶಿ ಶಕ್ತಿಗಳ ಪಿತೂರಿಯ ವಿರುದ್ಧ ಪ್ರತಿಭಟನೆ ನಡೆಸುವಂತೆ ಯುವ ಜನತೆಗೆ ಇಮ್ರಾನ್ ಕರೆ ನೀಡಿದ್ದು, 'ನೀವು ಮೌನವಾಗಿ ಕೂರಬೇಕಿಲ್ಲ. ನೀವು ಮೌನವಹಿಸಿದರೆ, ಕೆಟ್ಟದ್ದರ ಪರವಾಗಿ ಕುಳಿತಿರುತ್ತೀರಿ. ಪಿತೂರಿಯ ವಿರುದ್ಧ ನೀವು ಪ್ರತಿಭಟಿಸಬೇಕು, ದನಿ ಎತ್ತಬೇಕು– ಅದು ನನಗಾಗಿ ಅಲ್ಲ, ನಿಮ್ಮ ಮುಂದಿನ ಭವಿಷ್ಯಕ್ಕಾಗಿ..' ಎಂದು ಶನಿವಾರ ಹೇಳಿದ್ದರು.
ಶಾಂತಿಯುತ ಪ್ರತಿಭಟನೆ ಮಾಡುವಂತೆ ಹೇಳಿರುವ ಅವರು, ಪಾಕಿಸ್ತಾನ ಸೇನೆಯ ವಿರುದ್ಧ ಮಾತನಾಡದಂತೆಯೂ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಆಳ-ಅಗಲ| ಪಾಕಿಸ್ತಾನ ಬಿಕ್ಕಟ್ಟಿನ ಹಲವು ಮುಖಗಳು
342 ಸದಸ್ಯ ಬಲದ ಪಾಕಿಸ್ತಾನದ ಕೆಳಮನೆಯಲ್ಲಿ ವಿರೋಧ ಪಕ್ಷದ ಅವಿಶ್ವಾಸ ಗೊತ್ತುವಳಿಯಿಂದ ಪಾರಾಗಲು ಇಮ್ರಾನ್ ಪರವಾಗಿ ಕನಿಷ್ಠ 172 ಮತಗಳು ಸಲ್ಲಿಕೆಯಾಗಬೇಕಿದೆ. ತಮ್ಮ ಪಿಟಿಐ ಪಕ್ಷದ ಸದಸ್ಯರು ಕಲಾಪಕ್ಕೆ ಹಾಜರಾಗುವಂತೆ ಅವರು ಆಗ್ರಹಿಸಿದ್ದಾರೆ.
ಪಾಕಿಸ್ತಾನದ ಇತಿಹಾಸದಲ್ಲಿ ಇದುವರೆಗೂ ಯಾವುದೇ ಪ್ರಧಾನಿ ಐದು ವರ್ಷಗಳ ಅಧಿಕಾರದ ಅವಧಿಯನ್ನು ಪೂರ್ಣಗೊಳಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.