ವಿಶ್ವಸಂಸ್ಥೆ: ಪ್ರಧಾನಿ ನರೇಂದ್ರ ಮೋದಿ ಅವರು ಇದೇ 27ರಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯ 74ನೇ ಅಧಿವೇಶನದಲ್ಲಿ ಜಾಗತಿಕ ನಾಯಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಈ ಅಧಿವೇಶನ ಉದ್ದೇಶಿಸಿ ಮಾತನಾಡಲಿರುವ ನಾಯಕರ ಪಟ್ಟಿಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸಹ ಇದ್ದಾರೆ. ಮೋದಿ ಅವರ ಭಾಷಣದ ಬಳಿಕ ಖಾನ್ ಸಹ ಅಧಿವೇಶನದಲ್ಲಿ ಮಾತನಾಡಲಿದ್ದಾರೆ.
ಸೆ.24ರಿಂದ 30ರವರೆಗೆ ಅಧಿವೇಶನ ನಡೆಯಲಿದೆ.
‘ಹೌಡಿ,ಮೋದಿ’: ಸೆ.22ರಂದು ಮೋದಿ ಅವರು ಹ್ಯೂಸ್ಟನ್‌ನಲ್ಲಿ ‘ಹೌಡಿ, ಮೋದಿ’ ಸಮಾವೇಶದಲ್ಲಿ ಭಾರತೀಯ–ಅಮೆರಿಕನ್ ಸಮುದಾಯ ಉದ್ದೇಶಿಸಿ ಮಾತನಾಡಲಿದ್ದಾರೆ.
ಮಹಾತ್ಮ ಗಾಂಧಿಯ 150ನೇ ಜನ್ಮವರ್ಷಾಚರಣೆ ಸಲುವಾಗಿ, ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ಮೋದಿ ಅವರು ಸೆ. 24ರಂದು, ‘ನಾಯಕತ್ವ: ಸಮಕಾಲೀನ ಜಗತ್ತಿನಲ್ಲಿ ಗಾಂಧಿಯ ಪ್ರಸ್ತುತತೆ’ ಎನ್ನುವ ವಿಶೇಷ ಕಾರ್ಯಕ್ರಮ ಆಯೋಜಿಸಲಿದ್ದಾರೆ.
ಜತೆಗೆ ನ್ಯೂಯಾರ್ಕ್‌ನಲ್ಲಿ ‘ಗಾಂಧಿ ಶಾಂತಿ ಉದ್ಯಾನ’ವನ್ನೂ ಉದ್ಘಾಟಿಸಲಿದ್ದಾರೆ. ಉದ್ಯಾನದಲ್ಲಿ ಗಾಂಧಿ ನೆನಪಿನಲ್ಲಿ 150 ಗಿಡಗಳನ್ನು ನೆಡಲು ನಿರ್ಧರಿಸಲಾಗಿದೆ.
ಒಂದು ವಾರ ಅವಧಿಯ ನ್ಯೂಯಾರ್ಕ್ ಪ್ರವಾಸದಲ್ಲಿ ಮೋದಿ ಅವರು, ಹಲವಾರು ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ಮಾತುಕತೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಸೆ.25ರಂದು ನಡೆಯಲಿರುವ ಬ್ಲೂಂಬರ್ಗ್ ಉದ್ಯಮ ಸಮ್ಮೇಳನದಲ್ಲಿ ಭಾಗವಹಿಸಲಿರುವ ಮೋದಿ, ಮುಖ್ಯ ಭಾಷಣಕಾರರಾಗಿರಲಿದ್ದಾರೆ.
‘ಗ್ಲೋಬಲ್ ಗೋಲ್‌ಕೀಪರ್’ ಪ್ರಶಸ್ತಿ
ಬಿಲ್ ಹಾಗೂ ಮೆಲಿಂದಾ ಗೇಟ್ಸ್ ಫೌಂಡೇಷನ್, ಈ ವರ್ಷದ ಗ್ಲೋಬಲ್ ಗೋಲ್‌ಕೀಪರ್ ಪ್ರಶಸ್ತಿಯನ್ನು ಮೋದಿ ಅವರಿಗೆ ಪ್ರದಾನ ಮಾಡಲಿದೆ.
ಸೆ.24ರಂದು ಗ್ಲೋಬಲ್ ಗೋಲ್ಸ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿದೆ.
‘ರಾಜಕೀಯ ನಾಯಕರು ತಮ್ಮ ದೇಶ ಅಥವಾ ಜಾಗತಿಕ ಮಟ್ಟದಲ್ಲಿ ಪರಿಣಾಮಕಾರಿ ಯೋಜನೆ ಅನುಷ್ಠಾನಗೊಳಿಸಲು ಬದ್ಧತೆ ತೋರಿದ್ದಲ್ಲಿ ಅದನ್ನು ಗುರುತಿಸುವ ಸಲುವಾಗಿ ಈ ಪ್ರಶಸ್ತಿ ನೀಡಲಾಗುತ್ತದೆ. ಸ್ವಚ್ಛ ಭಾರತ ಯೋಜನೆ ಆರಂಭಿಸಿದ್ದಕ್ಕಾಗಿ, ಮೋದಿ ಅವರಿಗೆ ಈ ಗೌರವ ನೀಡಲಾಗುತ್ತಿದೆ’ ಎಂದು ಫೌಂಡೇಷನ್ ತಿಳಿಸಿದೆ.
2014ರ ಅ.2ರಂದು ಮೋದಿ ಸ್ವಚ್ಛ ಭಾರತ ಯೋಜನೆ ಉದ್ಘಾಟಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.