ADVERTISEMENT

ಭಾರತದಲ್ಲಿ ಹೂಡಿಕೆ ಮಾಡಿ: ಫ್ರಾನ್ಸ್‌ನಲ್ಲಿ ಉದ್ಯಮಿಗಳಿಗೆ ಪ್ರಧಾನಿ ಮೋದಿ ಆಮಂತ್ರಣ

ಪಿಟಿಐ
Published 15 ಜುಲೈ 2023, 12:50 IST
Last Updated 15 ಜುಲೈ 2023, 12:50 IST
ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್
ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್   

ಪ್ಯಾರಿಸ್‌: ಭಾರತದಲ್ಲಿ ಹೂಡಿಕೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್‌ನ ಉದ್ಯಮಿಗಳಿಗೆ ಆಮಂತ್ರಣ ನೀಡಿದ್ದಾರೆ. 

ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಆಹ್ವಾನದ ಮೇರೆಗೆ ಮೋದಿ ಅವರು ಎರಡು ದಿನಗಳ ಕಾಲ ಫ್ರಾನ್ಸ್‌ ಪ್ರವಾಸ ಕೈಗೊಂಡಿದ್ದರು. 

ಪ್ರವಾಸದ ಭಾಗವಾಗಿ ನಡೆದ ಭಾರತ–ಫ್ರಾನ್ಸ್‌ ಸಿಇಒಗಳ ಸಭೆಯಲ್ಲಿ ಪ್ರಧಾನಿ ಮೋದಿ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.   

ADVERTISEMENT

ಈ ಬಗ್ಗೆ ಟ್ವಿಟರ್‌ನಲ್ಲಿ ಪೋಸ್ಟ್‌ ಪ್ರಕಟಿಸಿರುವ ಮೋದಿ, ‘ಭಾರತ–ಫ್ರಾನ್ಸ್‌ ನಡುವಿನ ವ್ಯಾಪಾರ ಸಹಕಾರ ವಿಸ್ತರಣೆಗೆ ಇರುವ ಮಾರ್ಗಗಳ ಕುರಿತು ಚರ್ಚಿಸಲು ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್‌ ಮತ್ತು ನಾನು ಪ್ರಮುಖ ಸಿಇಒಗಳ ಸಭೆ ನಡೆಸಿದ್ದೇವೆ. ಭಾರತದಲ್ಲಾಗುತ್ತಿರುವ ಸುಧಾರಣೆಗಳನ್ನು ಈ ವೇಳೆ ಒತ್ತಿ ಹೇಳಿದ್ದೇನೆ. ಭಾರತ ಒದಗಿಸುತ್ತಿರುವ ಅವಕಾಶಗಳನ್ನು ಬಳಸಿಕೊಳ್ಳುವಂತೆ ಉದ್ಯಮಿಗಳಿಗೆ ತಿಳಿಸಿದ್ದೇನೆ‘ ಎಂದು ಹೇಳಿದ್ದಾರೆ.      

ಭಾರತ ಮತ್ತು ಫ್ರಾನ್ಸ್‌ನ ಕಾರ್ಯತಂತ್ರ ಪಾಲುದಾರಿಕೆಗೆ 25 ವರ್ಷಗಳು ತುಂಬಿವೆ. ದ್ವಿಪಕ್ಷೀಯ ಒಪ್ಪಂದಗಳನ್ನು ಗಟ್ಟಿಗೊಳಿಸುವಲ್ಲಿ ಎರಡೂ ದೇಶಗಳ ಉದ್ಯಮಿಗಳು ಗಣನೀಯ ಕೊಡುಗೆ ನೀಡಿದ್ದಾರೆ ಎಂದು ಮೋದಿ ತಿಳಿಸಿದರು.  

ಬಾಸ್ಟಿಲ್‌ ಡೇ ಪರೇಡ್‌ನಲ್ಲಿ ಭಾರತ: ಪ್ರಧಾನಿ ಸಂತಸ 

ಪ್ಯಾರಿಸ್‌: ಫ್ರಾನ್ಸ್‌ನ ಬಾಸ್ಟಿಲ್ ಡೇ ಪಥಸಂಚಲನದಲ್ಲಿ ಭಾರತೀಯ ಸೇನಾ ತುಕಡಿಗಳಿಗೆ ಸ್ಥಾನ ಸಿಕ್ಕಿರುವುದಕ್ಕೆ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.  

‘ಫ್ರಾನ್ಸ್‌ ಭೇಟಿ ಸ್ಮರಣೀಯ. ಬಾಸ್ಟಿಲ್‌ ಡೇ ಪರೇಡ್‌ನಲ್ಲಿ ಭಾಗವಹಿಸಲು ಭಾರತೀಯ ಸೇನಾ ತುಕಡಿಗಳಿಗೆ ಅವಕಾಶ ಸಿಕ್ಕಿದ್ದು ಸಂತಸದ ವಿಚಾರ. ಸಮಾರಂಭದಲ್ಲಿ ಭಾಗವಹಿಸಲು ನನಗೆ ಆಮಂತ್ರಣ ನೀಡಿದ್ದು ಮತ್ತೊಂದು ವಿಶೇಷ.  ಫ್ರಾನ್ಸ್‌ ಅಧ್ಯಕ್ಷ ಮತ್ತು ಜನರ ಆತಿಥ್ಯಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಎರಡೂ ದೇಶಗಳ ಸ್ನೇಹ ಮುಗಿಲೆತ್ತರಕ್ಕೆ ತಲುಪಲಿ ಎಂದು ಆಶಿಸುತ್ತೇನೆ’ ಎಂದು ಮೋದಿ ಟ್ವೀಟರ್‌ನಲ್ಲಿ ಪೋಸ್ಟ್‌ ಪ್ರಕಟಿಸಿದ್ದಾರೆ.    

ಮೋದಿಗೆ ಮ್ಯಾಕ್ರನ್‌ ವಿಶೇಷ ಔತಣ 

ಪ್ಯಾರಿಸ್‌: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯಲ್‌ ಮ್ಯಾಕ್ರನ್‌ ಅವರು ಶುಕ್ರವಾರ ರಾತ್ರಿ ಲೂಎ ಮ್ಯೂಸಿಯಂನಲ್ಲಿ ವಿಶೇಷ ಔತಣಕೂಟ ಏರ್ಪಡಿಸಿದ್ದರು.   

ಮ್ಯಾಕ್ರನ್‌ ಮತ್ತು ಅವರ ಪತ್ನಿ, ಫ್ರಾನ್ಸ್‌ನ ಮೊದಲ ಮಹಿಳೆ ಬ್ರಿಗಿಟಿ ಮ್ಯಾಕ್ರನ್‌ ಅವರು ಮೋದಿಗೆ ಆತ್ಮಿಯ ಸ್ವಾಗತ ಕೋರಿದರು. ಭಾರತ ಮತ್ತು ಫ್ರಾನ್ಸ್‌ ನಡುವಿನ ಸ್ನೇಹ, ಸಾಮ್ಯತೆಗಳ ಬಗ್ಗೆ ಪ್ರಧಾನಿ ಮೋದಿ ಈ ವೇಳೆ ಪ್ರಸ್ತಾಪಿಸಿದರು. 

‘ಅಧ್ಯಕ್ಷ ಮ್ಯಾಕ್ರನ್‌ ಅವರು ಫ್ರಾನ್ಸ್‌ನ ಅತ್ಯುನ್ನತ ಪ್ರಶಸ್ತಿಯನ್ನು ನನಗೆ ಪ್ರದಾನ ಮಾಡಿದ್ದಾರೆ. ಇದು ನನಗೆ ಸಂದ ಗೌರವ ಮಾತ್ರವಲ್ಲ. ಭಾರತದ 140 ಕೋಟಿ ಜನರಿಗೆ ಸಿಕ್ಕ ಗೌರವ’ ಎಂದು ಮೋದಿ ಔತಣ ಕೂಟದಲ್ಲಿ ಹೇಳಿದರು.    

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.