ಬಿಷ್ಕೆಕ್: ‘ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧಗಳ ಸುಧಾರಣೆಗೆ ಜತೆಗೂಡಿ ಕೆಲಸ ಮಾಡುವ ಬಗ್ಗೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಜತೆಗೆ ನಡೆದ ಮಾತುಕತೆ ಫಲಪ್ರದವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕಿರ್ಗಿಸ್ತಾನ್ ರಾಜಧಾನಿ ಬಿಷ್ಕೆಕ್‌ನಲ್ಲಿ ಗುರುವಾರ ಆರಂಭವಾದ ಶಾಂಘೈ ಸಹಕಾರ ಸಂಘದ (ಎಸ್‌ಸಿಒ) ಶೃಂಗಸಭೆಯ ಸಂದರ್ಭದಲ್ಲಿ ಉಭಯ ನಾಯಕರು ಮಾತುಕತೆ ನಡೆಸಿದರು.
ಮೋದಿ ಅವರು ಪ್ರಧಾನಿಯಾಗಿ ಮರು ಆಯ್ಕೆಯಾದ ನಂತರ ಮೊದಲ ಬಾರಿಗೆ ಉಭಯ ನಾಯಕರ ನಡುವೆ ಮಾತುಕತೆ ನಡೆದಿದೆ. ಪಾಕಿಸ್ತಾನ ಮೂಲದ ಜೈಷ್–ಎ–ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್‌ನನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಭಾರತ ವಿಶ್ವಸಂಸ್ಥೆಗೆ ಸಲ್ಲಿಸಿದ್ದ ಪ್ರಸ್ತಾವಕ್ಕೆ, ‘ತಾಂತ್ರಿಕ’ ಕಾರಣವೊಡ್ಡಿ ತಾನು ನೀಡಿದ್ದ ತಡೆಯನ್ನು ಚೀನಾ ಹಿಂತೆಗೆದುಕೊಂಡ ನಂತರ ನಡೆದ ಈ ಮಾತುಕತೆ ಮಹತ್ವ ಪಡೆದಿದೆ.
‘ಭಾರತ–ಚೀನಾ ಸಂಬಂಧಗಳ ಸುಧಾರಣೆಯನ್ನು ನಮ್ಮ ಮಾತುಕತೆ ಒಳಗೊಂಡಿತ್ತು. ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಸುಧಾರಿಸಲು ನಾವು ಒಟ್ಟಾಗಿ ಕೆಲಸ ಮಾಡಲಿದ್ದೇವೆ. ಮಾತುಕತೆ ಫಲಪ್ರದವಾಗಿದೆ‘ ಎಂದು ನಿಯೋಗ ಮಟ್ಟದ ಮಾತುಕತೆ ನಂತರ ಮೋದಿ ಟ್ವೀಟ್ ಮಾಡಿದ್ದಾರೆ.
ಕಳೆದ ವರ್ಷ ವುಹಾನ್‌ನಲ್ಲಿ ನಡೆದ ಶೃಂಗಸಭೆ ಯಶಸ್ವಿಯಾಗಿತ್ತು. ಆ ಸಭೆಯ ನಂತರ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಗೊಂಡಿದೆ ಎಂದು ಮಾತುಕತೆ ಸಂದರ್ಭದಲ್ಲಿ ಪ್ರಸ್ತಾಪವಾಯಿತು.
ಈ ವರ್ಷದಲ್ಲಿ ಷಿ ಜಿನ್‌ಪಿಂಗ್ ಅವರು ಭಾರತಕ್ಕೆ ಭೇಟಿ ನೀಡಲಿದ್ದು, ಸಭೆಯಲ್ಲಿ ಈ ಕುರಿತು ಸಹ ಚರ್ಚೆ ನಡೆಯಿತು. ಭಾರತದ ಆಹ್ವಾನಕ್ಕೆ ಅವರು ಸಮ್ಮತಿ ವ್ಯಕ್ತಪಡಿಸಿದ್ದಾರೆ.
ಪರಸ್ಪರ ಶುಭಾಶಯ ಕೋರಿದ ನಾಯಕರು
ಮಾತುಕತೆಗೂ ಮುನ್ನ ಮೋದಿ ಅವರು ಪ್ರಧಾನಿಯಾಗಿ ಮರು ಆಯ್ಕೆಯಾಗಿದ್ದಕ್ಕೆ ಜಿನ್‌ಪಿಂಗ್ ಶುಭಾಶಯ ಕೋರಿದರು. ‘ಚುನಾವಣೆಯಲ್ಲಿ ಗೆಲ್ಲುತ್ತಿದ್ದಂತೆ ನಿಮ್ಮ ಸಂದೇಶ ಬಂದಿತ್ತು. ಈಗ ಮತ್ತೊಮ್ಮೆ ಶುಭಾಶಯ ಕೋರಿದ್ದೀರಿ. ಇದಕ್ಕೆ ನಾನು ನಿಮಗೆ ಕೃತಜ್ಞನಾಗಿದ್ದೇನೆ’ ಎಂದು ಮೋದಿ ಹೇಳಿದರು.
ಜೂನ್ 15ಕ್ಕೆ 66ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ಜಿನ್‌ಪಿಂಗ್ ಅವರಿಗೆ ಭಾರತೀಯರ ಪರವಾಗಿ ಮೋದಿ ಶುಭಾಶಯ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.