ದೋಹಾ: ಪ್ರಧಾನಿ ನರೇಂದ್ರ ಮೋದಿ ಅವರು ಕತಾರ್‌ನ ದೊರೆ ಶೇಖ್ ತಮೀಮ್ ಬಿನ್ ಹಮ್ಮದ್ ಅಲ್ ಥಾಣಿ ಅವರ ಜೊತೆ ಗುರುವಾರ ಇಲ್ಲಿ ಮಾತುಕತೆ ನಡೆಸಿದರು. ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ವೃದ್ಧಿ ಕುರಿತು ಅವರು ಈ ವೇಳೆ ಚರ್ಚಿಸಿದರು.
ಎರಡು ದಿನಗಳ ಯುಎಇ ಪ್ರವಾಸದ ಬಳಿಕ ಮೋದಿ ಅವರು ಬುಧವಾರ ರಾತ್ರಿ ಕತಾರ್‌ಗೆ ಬಂದು, ಇಲ್ಲಿನ ಪ್ರಮುಖರ ಜತೆ ಮಾತುಕತೆ ನಡೆಸಿದರು.
ಭಾರತೀಯ ನೌಕಾಪಡೆಯ ಎಂಟು ಮಂದಿ ಮಾಜಿ ಸಿಬ್ಬಂದಿಗೆ ಕತಾರ್‌ನಲ್ಲಿ ವಿಧಿಸಲಾಗಿದ್ದ ಮರಣದಂಡನೆಯನ್ನು ಹಿಂಪಡೆದು, ಅವರನ್ನು ಬಿಡುಗಡೆ ಮಾಡಿದ್ದಕ್ಕಾಗಿ ಶೇಖ್ ತಮೀಮ್ ಅವರಿಗೆ ಪ್ರಧಾನಿ ಧನ್ಯವಾದ ಸಲ್ಲಿಸಿದರು.
ಭಾರತ– ಕತಾರ್ ನಡುವಣ ವ್ಯಾಪಾರ, ಹೂಡಿಕೆ, ಇಂಧನ, ಹಣಕಾಸು ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ದ್ವಿಪಕ್ಷೀಯ ಸಹಕಾರವನ್ನು ವಿಸ್ತರಿಸುವ ಕುರಿತು ಉಭಯ ನಾಯಕರು ಚರ್ಚಿಸಿದರು.
ಪಶ್ಚಿಮ ಏಷ್ಯಾದಲ್ಲಿ ಈಚೆಗೆ ನಡೆದಿರುವ ಪ್ರದೇಶಿಕ ಬೆಳವಣಿಗೆ ಮತ್ತು ಈ ಭಾಗದಲ್ಲಿ ಶಾಂತಿ, ಸ್ಥಿರತೆಯನ್ನು ಎತ್ತಿಹಿಡಿಯಬೇಕಿರುವ ಅಗತ್ಯಗಳ ಕುರಿತೂ ಅವರು ಮಾತನಾಡಿದರು. ಬಳಿಕ ಮೋದಿ ಅವರು ಕತಾರ್‌ನ ದೊರೆಗೆ ಭಾರತಕ್ಕೆ ಭೇಟಿ ನೀಡುವಂತೆಯೂ ಆಹ್ವಾನಿಸಿದರು.
ನಂತರ ಕತಾರ್ ಪ್ರಧಾನಿ ಮೊಹಮ್ಮದ್ ಬಿನ್ ಅಬ್ದುಲ್‌ರಹಮಾನ್ ಬಿನ್ ಜಸ್ಸಿಮ್ ಅಲ್ ಥಾಣಿ ಅವರು ಮೋದಿ ಅವರಿಗಾಗಿ ಔತಣಕೂಟ ಏರ್ಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.