ADVERTISEMENT

ಮೂರು ರಾಷ್ಟ್ರಗಳ ಯಶಸ್ವಿ ಪ್ರವಾಸದ ಬಳಿಕ ತವರಿಗೆ ಪ್ರಯಾಣ ಬೆಳೆಸಿದ ಪ್ರಧಾನಿ ಮೋದಿ

ಪಿಟಿಐ
Published 22 ನವೆಂಬರ್ 2024, 3:03 IST
Last Updated 22 ನವೆಂಬರ್ 2024, 3:03 IST
<div class="paragraphs"><p>ಗಯಾನಾ ಸಂಸತ್ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ</p></div>

ಗಯಾನಾ ಸಂಸತ್ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

   

(ಪಿಟಿಐ ಚಿತ್ರ)

ಜಾರ್ಜ್‌ಟೌನ್: ಐದು ದಿನಗಳ ಪರ್ಯಂತ, ಮೂರು ರಾಷ್ಟ್ರಗಳ ಯಶಸ್ವಿ ಪ್ರವಾಸದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ತವರಿಗೆ ಪ್ರಯಾಣ ಬೆಳೆಸಿದ್ದಾರೆ.

ADVERTISEMENT

ಬ್ರೆಜಿಲ್‌ನಲ್ಲಿ ಜಿ20 ಶೃಂಗದ ಬಳಿಕ ಗಯಾನಾದ ಜಾರ್ಜ್‌ಟೌನ್‌ನಲ್ಲಿ ಭಾರತ-ಕೆರಿಕಮ್ (ಕೆರಿಬಿಯನ್ ಕಮ್ಯುನಿಟಿ) ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು.

ಮೋದಿ ತಮ್ಮ ಪ್ರವಾಸದ ವೇಳೆ ಹಲವು ರಾಷ್ಟ್ರಗಳ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು.

ಪಶ್ಚಿಮ ಆಫ್ರಿಕಾ ದೇಶವಾದ ನೈಜೀರಿಯಾಕ್ಕೆ ಪ್ರಧಾನಿ ಮೋದಿ ಭಾನುವಾರ ಭೇಟಿ ನೀಡಿದ್ದರು. ಆ ಮೂಲಕ 17 ವರ್ಷಗಳ ಬಳಿಕ ಭಾರತೀಯ ಪ್ರಧಾನಿಯೊಬ್ಬರು ಆ ದೇಶಕ್ಕೆ ಭೇಟಿ ನೀಡಿದಂತಾಗಿತ್ತು. ಈ ಸಂದರ್ಭದಲ್ಲಿ ನೈಜೀರಿಯಾ ಸರ್ಕಾರವು 'ದಿ ಗ್ರಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಗರ್' ಪ್ರಶಸ್ತಿ ನೀಡಿ ಗೌರವಿಸಿತ್ತು.

ಬಳಿಕ ಅಲ್ಲಿಂದ ಬ್ರೆಜಿಲ್‌ಗೆ ತೆರಳಿದ್ದ ಮೋದಿ ಜಿ20 ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಅಮೆರಿಕದ ಅಧ್ಯಕ್ಷ ಜೋ ಬೈಡನ್, ಫ್ರಾನ್ಸ್‌ನ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಮತ್ತು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರನ್ನು ಪ್ರಧಾನಿ ಮೋದಿ ಭೇಟಿಯಾಗಿದ್ದರು. ಅನೇಕ ಜಾಗತಿಕ ನಾಯಕರೊಂದಿಗೂ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು.

ಬಳಿಕ ಗಯಾನಾ ದೇಶಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ್ದರು. ಆ ದೇಶಕ್ಕೆ 50ಕ್ಕೂ ಅಧಿಕ ವರ್ಷಗಳ ಬಳಿಕ ಭೇಟಿ ನೀಡಿದ ಭಾರತದ ಪ್ರಧಾನಿ ಎನಿಸಿದ್ದರು.

ಈ ಸಂದರ್ಭದಲ್ಲಿ ಕೋವಿಡ್‌–19 ಸಾಂಕ್ರಾಮಿಕದ ಅವಧಿಯಲ್ಲಿ ಅಗತ್ಯ ನೆರವು ಮತ್ತು ಲಸಿಕೆ ಪೂರೈಸಿದ್ದನ್ನು ಪರಿಗಣಿಸಿ, ಗಯಾನಾ ಹಾಗೂ ಡೊಮಿನಿಕಾ ರಾಷ್ಟ್ರಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿವೆ.

ಗಯಾನಾದಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 'ಸಂಸ್ಕೃತಿ, ತಿನಿಸು ಮತ್ತು ಕ್ರಿಕೆಟ್ ಈ ಮೂರು ಅಂಶಗಳು ಗಯಾನಾದೊಂದಿಗೆ ಭಾರತವನ್ನು ಆಳವಾಗಿ ಸಂಪರ್ಕಿಸುತ್ತವೆ' ಎಂದು ಉಲ್ಲೇಖಿಸಿದ್ದರು.

ಗಯಾನಾದ ಸಂಸತ್ ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ಮೋದಿ, 'ಭಾರತ ಎಂದಿಗೂ ವಿಸ್ತರಣ ನೀತಿ ಹೊಂದಿರಲಿಲ್ಲ. ಇತರರ ಸಂಪನ್ಮೂಲಗಳನ್ನು ಕಸಿದುಕೊಳ್ಳುವ ಉದ್ದೇಶದಿಂದ ದೂರ ಉಳಿದಿತ್ತು' ಎಂದು ಹೇಳಿದ್ದರು.

ಗಯಾನಾದಲ್ಲಿ ಮಹಾತ್ಮಾ ಗಾಂಧೀಜಿ ಪ್ರತಿಮೆಗೆ ಪ್ರಧಾನಿ ಮೋದಿ ಗೌರವ ನಮನ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.