ಜಾರ್ಜ್‌ಟೌನ್, ಗಯಾನಾ: ಭಾರತ ಹಾಗೂ ಕೆರಿಬಿಯನ್ ದೇಶಗಳ ನಡುವಿನ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಸಂಬಂಧ ವೃದ್ಧಿ, ಪರಸ್ಪರ ಸಹಕಾರ ವೃದ್ಧಿಸುವ ಕುರಿತು ವಿಸ್ತೃತ ಚರ್ಚೆ ನಡೆಸಿದರು.
ಗಯಾನಾದ ರಾಜಧಾನಿ ಜಾರ್ಜ್‌ಟೌನ್‌ನಲ್ಲಿ ನಡೆಯುತ್ತಿರುವ 'ಭಾರತ-ಕೆರಿಕಮ್' (ಕೆರಿಬಿಯನ್ ಕಮ್ಯುನಿಟಿ) ಶೃಂಗಸಭೆಯಲ್ಲಿ ಸುರಿನಾಮ್‌ನ ಅಧ್ಯಕ್ಷ ಚಂದ್ರಿಕ ಪೆರ್ಸಾದ್ ಸಂತೊಖಿ, ಗಯಾನಾ ಅಧ್ಯಕ್ಷ ಡಾ.ಮೊಹಮ್ಮದ್ ಇರ್ಫಾನ್ ಅಲಿ, ಸೇಂಟ್ ಲೂಸಿಯಾ ಅಧ್ಯಕ್ಷ ಫಿಲಿಪ್ ಜೆ.ಪಿಯರ್, ಆಂಟಿಗುವಾ ಮತ್ತು ಬಾರ್ಬುಡಾದ ಅಧ್ಯಕ್ಷ ಗಾಸ್ಟನ್ ಬ್ರೌನೆ, ಗ್ರೆನಡಾದ ಅಧ್ಯಕ್ಷ ಡಿಕನ್ ಮಿಚೆಲ್, ಬಹಮಾಸ್‌ನ ಅಧ್ಯಕ್ಷ ಫಿಲಿಪ್ ಬ್ರೆವ್, ಬಾರ್ಬಡೊಸ್‌ನ ಅಧ್ಯಕ್ಷ ಮಿಯಾ ಅಮೊರ್ ಮೊಟ್ಲೆ, ಟ್ರಿನಿಡಾಡ್ ಅಂಡ್ ಟೊಬಾಗೊದ ಅಧ್ಯಕ್ಷ ಡಾ.ಕೇತ್ ರೌವ್ಲೆ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.
ಕೌಶಲ ಅಭಿವೃದ್ಧಿ, ಕೃಷಿ, ಔಷಧ, ಶಿಕ್ಷಣ ಹಾಗೂ ಇಂಧನ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧ ವೃದ್ಧಿ ನಿಟ್ಟಿನಲ್ಲಿ ಕೆರಿಬಿಯನ್ ದೇಶಗಳ ಮುಖ್ಯಸ್ಥರ ಜೊತೆಗೂ ಚರ್ಚೆ ನಡೆಸಿದರು.
ಸುರಿನಾಮ್‌ನ ಹಲವು ಅಭಿವೃದ್ಧಿ ಯೋಜನೆಗಳಿಗೆ ಅಗತ್ಯ ನೆರವು ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಚಂದ್ರಿಕ ಪೆರ್ಸಾದ್ ಸಂತೊಖಿ ಅವರಿಗೆ ಭರವಸೆ ನೀಡಿದರು.
ಟ್ರಿನಿಡಾಡ್ –ಟೊಬಾಗೊದ ಅಧ್ಯಕ್ಷ ಡಾ.ಕೇತ್ ಜೊತೆಗಿನ ಭೇಟಿಯು ‘ಅತ್ಯಂತ ಫಲಪ್ರದ’ ಎಂದು ವಿದೇಶಾಂಗ ಇಲಾಖೆ ಬಣ್ಣಿಸಿದ್ದು, ದ್ವಿಪಕ್ಷೀಯ ವ್ಯಾಪಾರ ವೃದ್ಧಿ ನಿಟ್ಟಿನಲ್ಲಿ ಚರ್ಚೆ ನಡೆದಿದೆ.
‘ವಿಜ್ಞಾನ, ಆರೋಗ್ಯಕ್ಷೇತ್ರ, ಶಿಕ್ಷಣ, ನವೀಕರಿಸಬಹುದಾದ ಇಂಧನ, ಕೃಷಿ ಕ್ಷೇತ್ರದಲ್ಲಿ ಎರಡು ರಾಷ್ಟ್ರಗಳ ಪರಸ್ಪರ ಸಹಕಾರ ಸಂಬಂಧ ಒಪ್ಪಂದ ಮಾಡಿಕೊಂಡಿದ್ದು, ಭಾರತದ ‘ಯುಪಿಐ’ ವ್ಯವಸ್ಥೆಯನ್ನು ಜಾರಿಗೊಳಿಸಲು ಒಪ್ಪಿಕೊಂಡಿರುವುದು ಅತ್ಯಂತ ಸಂತೋಷ ಉಂಟುಮಾಡಿದೆ’ ಎಂದು ‘ಎಕ್ಸ್’ನಲ್ಲಿ ಪ್ರಧಾನಿ ಮೋದಿ ತಿಳಿಸಿದ್ದಾರೆ.
ಪ್ರಶಸ್ತಿಯನ್ನು 140 ಕೋಟಿ ಭಾರತೀಯರಿಗೆ ಸಮರ್ಪಿಸುತ್ತೇನೆ. ಇದು ಉಭಯ ರಾಷ್ಟ್ರಗಳ ನಡುವೆ ಬೇರ್ಪಡಲು ಸಾಧ್ಯವಾಗದ ಬಾಂಧವ್ಯದ ಸೂಚಕವಾಗಿದೆನರೇಂದ್ರ ಮೋದಿ ಪ್ರಧಾನಿ (ಡೊಮಿನಿಕಾ ಅವಾರ್ಡ್ ಆಫ್ ಆನರ್ ಸ್ವೀಕರಿಸಿ)
ಜಾರ್ಜ್‌ಟೌನ್ (ಗಯಾನಾ): ಕೋವಿಡ್–19 ಸಾಂಕ್ರಾಮಿಕದ ಅವಧಿಯಲ್ಲಿ ಅಗತ್ಯ ನೆರವು ಮತ್ತು ಲಸಿಕೆ ಪೂರೈಸಿದ್ದನ್ನು ಪರಿಗಣಿಸಿ ಗಯಾನಾ ಹಾಗೂ ಡೊಮಿನಿಕಾ ರಾಷ್ಟ್ರಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿವೆ.
ಮೂರು ರಾಷ್ಟ್ರಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಕೊನೆಯ ಭೇಟಿಯಾಗಿ ಗಯಾನಾಕ್ಕೆ ಭೇಟಿ ನೀಡಿದರು. ಈ ವೇಳೆ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷ ಡಾ. ಮೊಹಮ್ಮದ್ ಇರ್ಫಾನ್ ಅಲಿ ಅವರು ಮೋದಿ ಅವರಿಗೆ ‘ದಿ ಆರ್ಡರ್ ಆಫ್ ಎಕ್ಸಲೆನ್ಸ್’ ನೀಡಿ ಗೌರವಿಸಿದರು.
ಈ ಗೌರವಕ್ಕೆ ಪಾತ್ರವಾದ ನಾಲ್ಕನೇ ವಿದೇಶಿ ವ್ಯಕ್ತಿಯಾಗಿದ್ದಾರೆ. ಡೊಮಿನಿಕಾ ದೇಶವು ತನ್ನ ಅತ್ಯುನ್ನತ ನಾಗರಿಕ ಗೌರವ ‘ಡೊಮಿನಿಕಾ ಅವಾರ್ಡ್ ಆಫ್ ಆನರ್' ನೀಡಿ ಪ್ರಧಾನಿ ಮೋದಿ ಅವರನ್ನು ಗೌರವಿಸಿದೆ. ಡೊಮಿನಿಕಾ ದ್ವೀಪರಾಷ್ಟ್ರದ ಅಧ್ಯಕ್ಷೆ ಸಿಲ್ವೆನಿ ಬರ್ಟನ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಕೋವಿಡ್–19 ಸಾಂಕ್ರಾಮಿಕದ ಅವಧಿಯಲ್ಲಿ ಮೋದಿ ಅವರು ಡೊಮಿನಿಕಾಗೆ ನೀಡಿದ ನೆರವು ಮತ್ತು ಉಭಯ ದೇಶಗಳ ಬಾಂಧವ್ಯವನ್ನು ಬಲಪಡಿಸುವಲ್ಲಿ ಅವರು ತೋರಿದ ಬದ್ಧತೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.