ನ್ಯೂಯಾರ್ಕ್: ವಿಶ್ವಸಂಸ್ಥೆಯ ಶೃಂಗಸಭೆಯ ವೇಳೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರನ್ನು ಭೇಟಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಆದಷ್ಟು ಬೇಗನೇ ಇತ್ಯರ್ಥಗೊಳಿಸಲು, ಪ್ರದೇಶದಲ್ಲಿ ಶಾಂತಿ ನೆಲೆಸಲು ಮತ್ತು ಸ್ಥಿರತೆ ಕಾಪಾಡಲು ಭಾರತದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.
ಅಮೆರಿಕಕ್ಕೆ ಮೂರು ದಿನಗಳ ಭೇಟಿಯ ವೇಳೆ ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ 'ಭವಿಷ್ಯದ ಶೃಂಗ'ದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದರು.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿರುವ ಪ್ರಧಾನಿ ಮೋದಿ, 'ನ್ಯೂಯಾರ್ಕ್‌ನಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರನ್ನು ಭೇಟಿಯಾಗಿದ್ದೇನೆ. ಉಭಯ ದೇಶಗಳ ನಡುವಣ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಳೆದ ತಿಂಗಳ ಉಕ್ರೇನ್ ಭೇಟಿಯ ವೇಳೆ ನಡೆದ ಮಾತುಕತೆಯನ್ನು ಫಲಪ್ರದವಾಗಿ ಜಾರಿಗೊಳಿಸಲು ಬದ್ಧರಾಗಿದ್ದೇವೆ. ಉಕ್ರೇನ್‌ನಲ್ಲಿ ಸಂಘರ್ಷಕ್ಕೆ ಆದಷ್ಟು ಬೇಗನೇ ಪರಿಹಾರ ಕಂಡುಕೊಳ್ಳುವುದು ಮತ್ತು ಶಾಂತಿ ಹಾಗೂ ಸ್ಥಿರತೆಯ ಮರುಸ್ಥಾಪನೆಗೆ ಭಾರತದ ಬೆಂಬಲವನ್ನು ಪುನರುಚ್ಚರಿಸಿದ್ದೇನೆ' ಎಂದು ಅವರು ತಿಳಿಸಿದ್ದಾರೆ.
ಉಕ್ರೇನ್ ಸಂಘರ್ಷಕ್ಕೆ ಶಾಶ್ವತ ಮತ್ತು ಶಾಂತಿಯುತ ಪರಿಹಾರಕ್ಕೆ ನೆರವಾಗಲು ಬೇಕಾದ ಎಲ್ಲ ನೆರವು ನೀಡಲು ಭಾರತ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ಸಂಘರ್ಷವನ್ನು ಮಾತುಕತೆಯ ಮೂಲಕ ಶಾಂತಿಯುತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಸ್ಪಷ್ಟ, ಸ್ಥಿರ ಮತ್ತು ರಚನಾತ್ಮಕ ನಿಲುವನ್ನು ಭಾರತ ಪುನರುಚ್ಛರಿಸಿದೆ.
ಮತ್ತೊಂದೆಡೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಝೆಲೆನ್‌ಸ್ಕಿ, 'ಭಾರತ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಈ ವರ್ಷ ಮೂರನೇ ಬಾರಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದೇನೆ. ಉಭಯ ದೇಶಗಳ ನಡುವಣ ಬಾಂಧವ್ಯವನ್ನು ಸಕ್ರಿಯವಾಗಿ ವೃದ್ಧಿಗೊಳಿಸಲಾಗುತ್ತಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಗಟ್ಟಿಗೊಳಿಸಲು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ' ಎಂದು ತಿಳಿಸಿದ್ದಾರೆ.
ಇದು ಕಳೆದ ಮೂರು ತಿಂಗಳ ಅವಧಿಯಲ್ಲಿ ಉಭಯ ನಾಯಕರ ನಡುವಣ ಮೂರನೇ ಭೇಟಿಯಾಗಿದೆ. ಆಗಸ್ಟ್ 23ರಂದು ಉಕ್ರೇನ್ ಭೇಟಿ ವೇಳೆ ಕೀವ್‌ನಲ್ಲಿ ಮೋದಿ ಹಾಗೂ ಝೆಲೆನ್‌ಸ್ಕಿ ಮಾತುಕತೆ ನಡೆಸಿದ್ದರು. ಬಳಿಕ ಜೂನ್‌ನಲ್ಲಿ ಇಟಲಿಯಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಪರಸ್ಪರ ಭೇಟಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.