ADVERTISEMENT

ಹೂಡಿಕೆಗೆ ಉತ್ತೇಜನ: ಭಾರತ–ಯುಎಇ ಒಪ್ಪಂದ

ಪರಸ್ಪರ ರಾಷ್ಟ್ರಗಳಲ್ಲಿ ಹೂಡಿಕೆ ಆಕರ್ಷಣೆ , ವ್ಯಾಪಾರ, ಸಂಪರ್ಕ ಸೇವೆ ವೃದ್ಧಿಗೆ ಆದ್ಯತೆ

ಪಿಟಿಐ
Published 13 ಫೆಬ್ರುವರಿ 2024, 15:58 IST
Last Updated 13 ಫೆಬ್ರುವರಿ 2024, 15:58 IST
ಭಾರತದ ರುಪೇ ಕ್ರೆಡಿಟ್, ಡೆಬಿಟ್ ಕಾರ್ಡ್‌ ಬೆಂಬಲಿತ, ಯುಎಇಯ ಜೈವಾನ್‌ ಕಾರ್ಡ್‌ ಬಳಸಿ ನಗದು ಪಾವತಿ ಕ್ರಿಯೆಗೆ ಅಬುಧಾಬಿಯಲ್ಲಿ ಪ್ರಧಾನಿ ಮೋದಿ, ಯುಎಐ ಅಧ್ಯಕ್ಷ ಶೇಖ್ ಮೊಹಮ್ಮದ್‌ ಚಾಲನೆ ನೀಡಿದರು –ಪಿಟಿಐ ಚಿತ್ರ
ಭಾರತದ ರುಪೇ ಕ್ರೆಡಿಟ್, ಡೆಬಿಟ್ ಕಾರ್ಡ್‌ ಬೆಂಬಲಿತ, ಯುಎಇಯ ಜೈವಾನ್‌ ಕಾರ್ಡ್‌ ಬಳಸಿ ನಗದು ಪಾವತಿ ಕ್ರಿಯೆಗೆ ಅಬುಧಾಬಿಯಲ್ಲಿ ಪ್ರಧಾನಿ ಮೋದಿ, ಯುಎಐ ಅಧ್ಯಕ್ಷ ಶೇಖ್ ಮೊಹಮ್ಮದ್‌ ಚಾಲನೆ ನೀಡಿದರು –ಪಿಟಿಐ ಚಿತ್ರ   

ಅಬುಧಾಬಿ : ಭಾರತ ಹಾಗೂ ಯುಎಇಯಲ್ಲಿ ಪರಸ್ಪರ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡುವ ದ್ವಿಪಕ್ಷೀಯ ಹೂಡಿಕೆ ಒಪ್ಪಂದಕ್ಕೆ (ಬಿಐಟಿ) ಮಂಗಳವಾರ ಇಲ್ಲಿ ಸಹಿ ಹಾಕಲಾಯಿತು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಯುಎಐ ಅಧ್ಯಕ್ಷ ಶೇಖ್ ಮೊಹಮ್ಮದ್‌ ಬಿನ್‌ ಜಯೇದ್ ಅಲ್‌ ನಯ್ಯಾನ್ ಅವರು ಮಂಗಳವಾರ ಇಲ್ಲಿ ಒಪ್ಪಂದಕ್ಕೆ ಸಹಿ ಹಾಕುವುದಕ್ಕೆ ಸಾಕ್ಷಿಯಾದರು.

ಉಭಯ ರಾಷ್ಟ್ರಗಳಲ್ಲಿ ಹೂಡಿಕೆಗೆ ಇದು ಉತ್ತೇಜನ ನೀಡಲಿದೆ. ಸಮಗ್ರ ಆರ್ಥಿಕ ಪಾಲುದಾರಿಕೆ, ವ್ಯಾಪಾರ, ಸಂಚಾರ ಮಾರ್ಗ ಕುರಿತ ಒಡಂಬಡಿಕೆಗೂ ಸಹಿಹಾಕಲಾಯಿತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ADVERTISEMENT

ಸಾಗರೋತ್ತರ ನೇರ ಹೂಡಿಕೆಯ ಅವಕಾಶ ಸೃಷ್ಟಿಸುವುದು, ದೇಶೀಯ ಉತ್ಪಾದನೆಗೆ ಪ್ರೋತ್ಸಾಹ ನೀಡುವುದು, ಆಮದು ಮೇಲಿನ ಅವಲಂಬನೆ ತಪ್ಪಿಸಿ, ರಫ್ತು ವಹಿವಾಟು ಹೆಚ್ಚಿಸುವುದು ಇದರ ಗುರಿಯಾಗಿದೆ ಎಂದೂ ತಿಳಿಸಿದೆ. 

ಅಲ್ಲದೆ, ಭಾರತ –ಮಧ್ಯ ಪ್ರಾಚ್ಯ–ಯೂರೋಪ್ ಆರ್ಥಿಕ ಕಾರಿಡಾರ್ ಅಭಿವೃದ್ಧಿ, ಹಡಗು, ರೈಲು ಸಂಚಾರ ನೆಟ್‌ವರ್ಕ್ ಅಭಿವೃದ್ಧಿ  ಕುರಿತ ಒಪ್ಪಂದಕ್ಕೂ ಉಭಯ ಸರ್ಕಾರಗಳು ಸಹಿ ಹಾಕಿದವು. 

ಇದಕ್ಕೂ ಮೊದಲು ಎರಡು ದಿನದ ಭೇಟಿಗಾಗಿ ಇಲ್ಲಿಗೆ ಆಗಮಿಸಿದ ಪ್ರಧಾನಿ ಅವರನ್ನು ಯುಎಇ ಅಧ್ಯಕ್ಷರು ಬರಮಾಡಿಕೊಂಡರು. ಇದು,ಕಳೆದ ಎಂಟು ತಿಂಗಳಲ್ಲಿ ಅಬುಧಾಬಿಗೆ ಪ್ರಧಾನಿಯವರ ಮೂರನೇ ಭೇಟಿಯಾಗಿದೆ.  

ಯುಎಇ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರಿಕೆಯ ರಾಷ್ಟ್ರವಾಗಿದ್ದು, 2022 ಮತ್ತು 2023ರ ಅವಧಿಯಲ್ಲಿ ಸುಮಾರು ₹ 70 ಸಾವಿರ ಕೋಟಿ ವಹಿವಾಟು ನಡೆದಿದೆ.

ಬಳಿಕ ಇಲ್ಲಿನ ಜಯೇದ್‌ ಸ್ಪೋರ್ಟ್‌ ಸಿಟಿ ಕ್ರೀಡಾಂಗಣದಲ್ಲಿ ಪ್ರಧಾನಿ ಅವರು ಯುಎಇಯಲ್ಲಿರುವ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು. ಭಾರತ ಮೂಲದ ಸುಮಾರು 60 ಸಾವಿರ ಜನರು ಭಾಗವಹಿಸಿದ್ದರು. 

ದೇವಸ್ಥಾನ ಉದ್ಘಾಟನೆ 

ಪ್ರಧಾನಿ ಮೋದಿ ಅವರು ಬುಧವಾರ, ಇಲ್ಲಿ ನಿರ್ಮಾಣವಾಗಿರುವ ಬೊಚಾಸನ್ವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥಾ (ಬಿಎಪಿಎಸ್‌) ಮಂದಿರವನ್ನು ಉದ್ಘಾಟಿಸುವರು. 

ಅಬು ಮುರೇಖಾದಲ್ಲಿ 27 ಎಕರೆ ವಿಸ್ತೀರ್ಣದ ಭೂಮಿಯಲ್ಲಿ ಮಂದಿರ ನಿರ್ಮಾಣವಾಗಿದೆ. 2019ರಲ್ಲಿ ನಿರ್ಮಾಣ ಚಟುವಟಿಕೆ ಆರಂಭವಾಗಿತ್ತು. ದೇವಸ್ಥಾನಕ್ಕೆ ಭೂಮಿ ನೀಡಿದ್ದಕ್ಕಾಗಿ ಯುಎಇ ಅಧ್ಯಕ್ಷರಿಗೆ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ.

ಯುಎಇಯಲ್ಲಿ ಇನ್ನೂ ಮೂರು ಹಿಂದೂ ದೇವಾಲಯಗಳಿವೆ. ಆದರೆ, ವಿಸ್ತಾರವಾದ ಭೂಮಿಯಲ್ಲಿ, ಕಲ್ಲಿನಲ್ಲಿ ನಿರ್ಮಾಣ ಮಾಡಲಾಗಿರುವ ಈ ದೇವಸ್ಥಾನ, ಗಲ್ಫ್ ವಲಯದಲ್ಲಿಯೇ ಅತಿ ದೊಡ್ಡದು ಎಂಬ ಹಿರಿಮೆಗೆ ‍‍‍ಪಾತ್ರವಾಗಲಿದೆ.

ಅಬುಧಾಬಿಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾರತ ಮೂಲದ ನಿವಾಸಿಗಳು ಮಂಗಳವಾರ ಆತ್ಮೀಯವಾಗಿ ಬರಮಾಡಿಕೊಂಡರು –ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.