ಬರ್ಲಿನ್: ಮೂರು ದಿನಗಳ ಯುರೋಪ್ ಭೇಟಿಗಾಗಿ ಸೋಮವಾರ ಬೆಳಿಗ್ಗೆ ಜರ್ಮನಿಗೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತೀಯ ಸಮುದಾಯದವರು ಇಲ್ಲಿನ ಆಡ್ಲೋನ್ ಕೆಂಪಿನ್‌ಸ್ಕಿ ಹೋಟೆಲ್‌ನಲ್ಲಿ ಹೃದಯಸ್ಪರ್ಶಿ ಸ್ವಾಗತ ನೀಡಿದರು. ಈ ಪೈಕಿ ದೇಶಭಕ್ತಿ ಗೀತೆ ಹಾಡಿದ ಬಾಲಕ, ಚಿತ್ರ ಬಿಡಿಸಿದ ಬಾಲಕಿ ಪ್ರಧಾನಿ ಅವರ ಹೃದಯವನ್ನು ಗೆದ್ದುಬಿಟ್ಟರು.
ಆಶುತೋಷ್ ಎಂಬ ಬಾಲಕ ದೇಶಭಕ್ತಿ ಗೀತೆ ಹಾಡುತ್ತಿದ್ದಾಗ ಅದನ್ನು ಆಲಿಸಿದ ಪ್ರಧಾನಿ ‘ಶಾಭಾಶ್’ ಎಂದು ಮೆಚ್ಚುಗೆ ಸೂಚಿಸಿದರು.ಮಾನ್ಯಾ ಮಿಶ್ರಾ ಎಂಬ ಬಾಲಕಿ ತಾನೇ ರಚಿಸಿದ ಪ್ರಧಾನಿ ಅವರ ಚಿತ್ರವನ್ನು ನೀಡಿದಳು. ಇದನ್ನು ಕಂಡು ಖುಷಿಗೊಂಡ ಮೋದಿ ಅವರು ಬಾಲಕಿಯ ಜತೆಗೆ ಫೊಟೊ ತೆಗೆಸಿಕೊಂಡು ಆಕೆ ರಚಿಸಿದ ಚಿತ್ರದ ಮೇಲೆ ತಮ್ಮ ಸಹಿ ಹಾಕಿದರು.
‘ಈ ಚಿತ್ರವನ್ನು ಅಮ್ಮನ ನೆರವಿನೊಂದಿಗೆ ನಾನೇ ರಚಿಸಿದ್ದೇನೆ. ಪ್ರಧಾನಿ ಅವರ ಭೇಟಿ ಒಂದು ಅದ್ಭುತ ಅನುಭವ. ಅವರೇ ನನ್ನ ಪ್ರೇರಕ ಶಕ್ತಿ. ನನ್ನ ಚಿತ್ರಕ್ಕೆ ಸಹಿ ಹಾಕಿ ಶಾಭಾಶ್ ಎಂದರು, ನನ್ನ ಕನಸು ಇಂದು ಈಡೇರಿದೆ’ ಎಂದು ಹೆಮ್ಮೆಯಿಂದ ಬೀಗುತ್ತಿದ್ದ ಬಾಲಕಿ ಮಾನ್ಯಾ ಹೇಳಿದಳು. ಬೆಳಿಗ್ಗೆ 4 ಗಂಟೆಯಿಂದಲೇ ಚಿಕ್ಕ ಮಕ್ಕಳ ಸಹಿತ ಭಾರತೀಯ ಸಮುದಾಯದವರು ಪ್ರಧಾನಿಗಾಗಿ ಹೋಟೆಲ್‌ನಲ್ಲಿ ಕಾಯುತ್ತಿದ್ದರು. ಜರ್ಮನಿಯಲ್ಲಿ 2.03 ಲಕ್ಷದಷ್ಟು ಮಂದಿ ಭಾರತೀಯರು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.