ಬ್ರೆಜಿಲ್: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಸೋಮವಾರ) ಬ್ರೆಜಿಲ್‌ನ ರಿಯೊ ಡಿ ಜನೈರೊಗೆ ಆಗಮಿಸಿದ್ದು, ಜಿ20 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
‘ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬ್ರೆಜಿಲ್‌ಗೆ ಬಂದಿದ್ದೇನೆ. ಸಭೆಯಲ್ಲಿ ವಿಶ್ವದ ಹಲವು ನಾಯಕರೊಂದಿಗೆ ಚರ್ಚೆಗಳು ಮತ್ತು ಅರ್ಥಪೂರ್ಣ ಮಾತುಕತೆ ನಡೆಯುವುದನ್ನು ನಾನು ಎದುರು ನೋಡುತ್ತಿದ್ದೇನೆ’ ಎಂದು ‘ಎಕ್ಸ್’ನಲ್ಲಿ ಮೋದಿ ಪೋಸ್ಟ್ ಮಾಡಿದ್ದಾರೆ.
ಮೋದಿ ಅವರು ಇಂದು ಮತ್ತು ನಾಳೆ ಬ್ರೆಜಿಲ್‌ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಶೃಂಗಸಭೆಯಲ್ಲಿ ಮೋದಿ, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್, ಅಮೆರಿಕದ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ಹಲವು ದೇಶಗಳ ಪ್ರಮುಖರು ಭಾಗಿಯಾಗಲಿದ್ದಾರೆ.
ತ್ರಿರಾಷ್ಟ್ರ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ನೈಜೀರಿಯಾದ ಅಬುಜಾಗೆ ಭೇಟಿ ನೀಡಿದ್ದರು. ಇದೇ ಸಂದರ್ಭದಲ್ಲಿ ಅವರು ನೈಜೀರಿಯಾ ಅಧ್ಯಕ್ಷ ಬೋಲಾ ಅಹಮ್ಮದ್ ಟಿನುಬು ಅವರೊಂದಿಗೆ ರಕ್ಷಣೆ, ವ್ಯಾಪಾರ ಮತ್ತು ಇಂಧನ ವಲಯಗಳಲ್ಲಿನ ದ್ವಿಪಕ್ಷೀಯ ಸಹಕಾರ ಕುರಿತು ಚರ್ಚಿಸಿದ್ದರು. ಇದರೊಂದಿಗೆ 17 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಈ ದೇಶಕ್ಕೆ ಭೇಟಿ ನೀಡಿದಂತಾಗಿದೆ.
ಜಿ20 ಶೃಂಗದಲ್ಲಿ ಭಾಗಿಯಾದ ನಂತರ ಮೋದಿ ಅವರು ಬುಧವಾರ ಗಯಾನಾ ದೇಶಕ್ಕೆ ತೆರಳಲಿದ್ದಾರೆ. ಗಯಾನಾ ಅಧ್ಯಕ್ಷ ಮೊಹಮದ್ ಇರ್ಫಾನ್ ಅಲಿ ಆಹ್ವಾನದ ಮೇರೆಗೆ ಮೋದಿ ಗಯಾನಾಗೆ ಭೇಟಿ ನೀಡುತ್ತಿದ್ದಾರೆ. ಇದರೊಂದಿಗೆ 50 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಈ ದೇಶಕ್ಕೆ ಭೇಟಿ ನೀಡಿದಂತಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.