ಟೋಕಿಯೊ: ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬೆಳಿಗ್ಗೆ ಜಪಾನ್ ತಲುಪಿದರು.
ಪ್ರಧಾನಿ ಅವರು ಇಂದು (ಸೋಮವಾರ) ಹಾಗೂ ನಾಳೆ ಎರಡು ದಿನಗಳ ಜಪಾನ್ ಪ್ರವಾಸದಲ್ಲಿದ್ದು, ಕ್ವಾಡ್ ನಾಯಕರ ಶೃಂಗಸಭೆ ಜತೆಗೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
‘ಟೋಕಿಯೊದಲ್ಲಿ ಬಂದಿಳಿದಿದ್ದೇನೆ. ಕ್ವಾಡ್ ಶೃಂಗಸಭೆ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದೇನೆ. ಕ್ವಾಡ್ ನಾಯಕರ ಜತೆ ಮಾತುಕತೆ ನೆಸಲಿದ್ದೇನೆ. ಜಪಾನ್‌ನ ಉದ್ಯಮಿಗಳ ಜತೆ ಹಾಗೂ ಭಾರತೀಯ ಸಮುದಾಯದವರ ಜತೆ ಸಂವಾದ ನಡೆಸಲಿದ್ದೇನೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿಯವರು ಟೋಕಿಯೊಗೆ ಆಗಮಿಸಿದ್ದು ಅವರಿಗೆ ಭವ್ಯ ಸ್ವಾಗತ ದೊರೆಯಿತು. ಕಳೆದ 8 ವರ್ಷಗಳಲ್ಲಿ ಅವರು 5ನೇ ಬಾರಿಗೆ ಜಪಾನ್‌ಗೆ ಭೇಟಿ ನೀಡಿದ್ದಾರೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಟ್ವೀಟ್ ಮಾಡಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ, ಆಸ್ಟ್ರೇಲಿಯಾದ ನೂತನ ಪ್ರಧಾನಿ ಆಂಥೋನಿ ಅಲ್ಬನೀಸ್ ಸಹ ಕ್ವಾಡ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
‘ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರ ಆಹ್ವಾನದ ಮೇರೆಗೆ ಟೋಕಿಯೊಗೆ ಭೇಟಿ ನೀಡಲಿದ್ದೇನೆ. ಭೇಟಿಯ ಸಂದರ್ಭದಲ್ಲಿ ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಬಲಪಡಿಸುವ ಗುರಿಯೊಂದಿಗೆ ಮಾತುಕತೆಯನ್ನು ಮತ್ತಷ್ಟು ಮುಂದುವರಿಸಲು ಎದುರು ನೋಡುತ್ತಿದ್ದೇನೆ’ ಎಂದು ಜಪಾನ್‌ಗೆ ಪ್ರಯಾಣ ಆರಂಭಿಸುವ ಮುನ್ನ ಮೋದಿ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.