ADVERTISEMENT

ಉಕ್ರೇನ್‌ನಲ್ಲಿ ತಕ್ಷಣವೇ ಕದನವಿರಾಮ ಘೋಷಣೆಯಾಗಲಿ: ಡೆನ್ಮಾರ್ಕ್‌ನಲ್ಲಿ ಮೋದಿ ಕರೆ

ಪಿಟಿಐ
Published 3 ಮೇ 2022, 12:38 IST
Last Updated 3 ಮೇ 2022, 12:38 IST
ಡೆನ್ಮಾರ್ಕ್‌ ಪ್ರಧಾನಿ ಮೆಟ್ಟೆ ಫ್ರೆಡೆರಿಕ್‌ಸೆನ್‌ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ - ಪಿಟಿಐ ಚಿತ್ರ
ಡೆನ್ಮಾರ್ಕ್‌ ಪ್ರಧಾನಿ ಮೆಟ್ಟೆ ಫ್ರೆಡೆರಿಕ್‌ಸೆನ್‌ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ - ಪಿಟಿಐ ಚಿತ್ರ   

ಕೋಪನ್‌ ಹೇಗನ್‌: ಉಕ್ರೇನ್‌ನಲ್ಲಿ ತಕ್ಷಣವೇ ಕದನವಿರಾಮ ಘೋಷಣೆಯಾಗಲಿ. ಬಿಕ್ಕಟ್ಟನ್ನು ನಿವಾರಿಸಲು ಉಕ್ರೇನ್ ಹಾಗೂ ರಷ್ಯಾ ರಾಜತಾಂತ್ರಿಕ ಮಾತುಕತೆಯ ಹಾದಿಗೆ ಮರಳಲಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ಡೆನ್ಮಾರ್ಕ್‌ ಪ್ರಧಾನಿ ಮೆಟ್ಟೆ ಫ್ರೆಡೆರಿಕ್‌ಸೆನ್‌ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಬಳಿಕ ಅವರು ವರದಿಗಾರರನ್ನು ಉದ್ದೇಶಿಸಿ ಮಾತನಾಡಿದರು.

ಮೆಟ್ಟೆ ಫ್ರೆಡೆರಿಕ್‌ಸೆನ್‌ ಜತೆ ಉಕ್ರೇನ್ ಬಿಕ್ಕಟ್ಟಿನ ವಿಚಾರವಾಗಿಯೂ ಮಾತುಕತೆ ನಡೆಸಿದ್ದೇನೆ ಎಂದ ಮೋದಿ, ಉಕ್ರೇನ್‌ನಲ್ಲಿ ತಕ್ಷಣವೇ ಕದನವಿರಾಮ ಘೋಷಣೆಯಾಗಲಿ ಎಂದರು.

ADVERTISEMENT

‘ಉಕ್ರೇನ್ ವಿಚಾರದಲ್ಲಿ ಭಾರತವು ರಷ್ಯಾ ಮೇಲೆ ತನ್ನ ಪ್ರಭಾವ ಬೀರಲಿದೆ ಎಂದು ಭಾವಿಸುತ್ತೇನೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಯುದ್ಧ ಹಾಗೂ ಹತ್ಯೆಯನ್ನು ನಿಲ್ಲಿಸಬೇಕು’ ಎಂದು ಮೆಟ್ಟೆ ಫ್ರೆಡೆರಿಕ್‌ಸೆನ್‌ ಹೇಳಿದರು.

‘ನನ್ನ ಸಂದೇಶ ಸ್ಪಷ್ಟವಾಗಿದೆ. ಪುಟಿನ್ ಅವರು ಯುದ್ಧ ಮತ್ತು ಹತ್ಯೆಯನ್ನು ನಿಲ್ಲಿಸಬೇಕು. ಯುದ್ಧವನ್ನು ಕೊನೆಗೊಳಿಸಲು ರಷ್ಯಾ ಮೇಲೆ ಭಾರತವು ತನ್ನ ಪ್ರಭಾವ ಬೀರಬಹುದು ಎಂದು ಭಾವಿಸಿದ್ದೇನೆ’ ಎಂದು ಅವರು ಹೇಳಿದರು.

‘ರಷ್ಯಾ–ಉಕ್ರೇನ್ ಸಂಘರ್ಷದಲ್ಲಿ ಯಾರೂ ಗೆಲ್ಲುವುದಿಲ್ಲ. ಎಲ್ಲರೂ ನಷ್ಟ ಅನುಭವಿಸುತ್ತಾರೆ ಎಂಬುದಾಗಿ ಭಾರತ ಭಾವಿಸುತ್ತದೆ’ ಎಂದು ಜರ್ಮನಿಯಲ್ಲಿ ಸೋಮವಾರ ಮೋದಿ ಹೇಳಿದ್ದರು.

ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಜತೆ ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದ ಮೋದಿ, ಯುದ್ಧವನ್ನು ಸ್ಥಗಿತಗೊಳಿಸುವಂತೆ ಉಕ್ರೇನ್ ಬಿಕ್ಕಟ್ಟಿನ ಆರಂಭದಲ್ಲೇ ಭಾರತ ಹೇಳಿತ್ತು. ವಿವಾದ ಪರಿಹಾರಕ್ಕೆ ಮಾತುಕತೆಯೊಂದೇ ಪರಿಹಾರ ಎಂದು ಹೇಳಿತ್ತು ಎಂಬುದಾಗಿ ನೆನಪಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.