ADVERTISEMENT

ಗಾಜಾ ಆಸ್ಪತ್ರೆ ಮೇಲೆ ದಾಳಿ: ಪ್ರಧಾನಿ ನರೇಂದ್ರ ಮೋದಿ ಖಂಡನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಅಕ್ಟೋಬರ್ 2023, 9:54 IST
Last Updated 18 ಅಕ್ಟೋಬರ್ 2023, 9:54 IST
<div class="paragraphs"><p>ಪ್ರಧಾನಿ ಮೋದಿ</p></div>

ಪ್ರಧಾನಿ ಮೋದಿ

   

ನವದೆಹಲಿ: ಗಾಜಾ ನಗರದಲ್ಲಿರುವ ಆಸ್ಪತ್ರೆಯೊಂದರ ಮೇಲೆ ಮಂಗಳವಾರ ನಡೆದ ದಾಳಿಯಲ್ಲಿ ಕನಿಷ್ಠ 500 ಮಂದಿ ಸಾವಿಗೀಡಾಗಿದ್ದಾರೆ. ಈ ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಖಂಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಮೋದಿ, ‘ಗಾಜಾದ ಅಹ್ಲಿ ಅರಬ್‌ ಆಸ್ಪತ್ರೆಯಲ್ಲಿ ಸಂಭವಿಸಿದ ದುರಂತದ ಬಗ್ಗೆ ತೀವ್ರ ಆಘಾತವಾಯಿತು. ಸಂತ್ರಸ್ತರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತೇನೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಇಸ್ರೇಲ್‌ –ಹಮಾಸ್‌ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ನಾಗರಿಕರ ಸಾವು –ನೋವುಗಳು ಗಂಭೀರ ಮತ್ತು ನಿರಂತರ ಕಾಳಜಿಯ ವಿಷಯವಾಗಿದೆ. ಸಂಬಂಧಪಟ್ಟವರನ್ನು ಹೊಣೆಗಾರರನ್ನಾಗಿಸಬೇಕು’ ಎಂದು ಮೋದಿ ಒತ್ತಾಯಿಸಿದ್ದಾರೆ.

ಘಟನೆ ವಿವರ...

‘ಗಾಜಾದ ಅಹ್ಲಿ ಅರಬ್‌ ಆಸ್ಪತ್ರೆ ಮೇಲೆ ಈ ದಾಳಿ ದಾಳಿ ನಡೆದಿದೆ. ಆಸ್ಪತ್ರೆಯಲ್ಲಿ ಗಾಯಾಳುಗಳು ಸೇರಿದಂತೆ ಹಲವರು ಆಶ್ರಯ ಪಡೆದಿದ್ದರು’ ಎಂದು ಹಮಾಸ್‌ ಪ್ರಾಬಲ್ಯವುಳ್ಳ ಪ್ಯಾಲೆಸ್ಟೀನ್‌ ಪ್ರಾಂತ್ಯದ ಆರೋಗ್ಯ ಸಚಿವಾಲಯವು ತಿಳಿಸಿದೆ.

ಗಾಜಾದ ಹಮಾಸ್‌ ಸರ್ಕಾರ ಈ ದಾಳಿಯನ್ನು ‘ಯುದ್ಧ ಅಪರಾಧ’ ಎಂದು ಹೇಳಿದೆ. ‘ಕಟ್ಟಡದ ಅವಶೇಷಗಳ ನಡುವೆ ನೂರಾರು ಜನರು ಸಿಕ್ಕಿಬಿದ್ದಿದ್ದಾರೆ, ಸಾವಿನ ಸಂಖ್ಯೆ ಹೆಚ್ಚಬಹುದು’ ಎಂದು ಸಚಿವಾಲಯವು ತಿಳಿಸಿದೆ.

ದಾಳಿ ಹಿಂದೆಯೇ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಿಟಕಿಗಳ ಗಾಜುಗಳು ಸಿಡಿದವು. ವಾಯು ದಾಳಿಗೆ ಸಿಕ್ಕವರ ದೇಹದ ಭಾಗಗಳು ವಿವಿಧೆಡೆ ಚೆಲ್ಲಾಡಿದ್ದವು ಎಂದು ವರದಿ ತಿಳಿಸಿದೆ.

ಆಸ್ಪತ್ರೆಯಲ್ಲಿದ್ದ ರೋಗಿಗಳು, ಗಾಯಾಳುಗಳನ್ನು ದಾಳಿ ಹಿನ್ನೆಲೆಯಲ್ಲಿ ಬಲವಂತವಾಗಿ ಬೇರೆಡೆಗೆ ಸ್ಥಳಾಂತರಿಸಲಾಯಿತು.ನಗರದ ಇತರೆ ಆಸ್ಪತ್ರೆಗಳಲ್ಲಿಯೂ ಹಲವು ನಿರಾಶ್ರಿತರು ಆಶ್ರಯ ಪಡೆದಿದ್ದಾರೆ ಎಂದು ಸಚಿವಾಲಯವು ತಿಳಿಸಿದೆ.

ಅಕ್ಟೋಬರ್ 7ರಂದು ಇಸ್ರೇಲ್‌ ಮತ್ತು ಹಮಾಸ್‌ ಬಂಡುಕೋರರ ನಡುವೆ ಸಂಘರ್ಷವು ಆರಂಭವಾದ ನಂತರ ಈವರೆಗೆ ಗಾಜಾಪಟ್ಟಿಯಲ್ಲಿ ಸುಮಾರು 3,000 ಜನರು ಹಾಗೂ ಇಸ್ರೇಲ್‌ನಲ್ಲಿ ಸುಮಾರು 1,400 ಜನರು ಸತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.