ನವದೆಹಲಿ: ಪ್ರಧಾನಿ ನರೇಂದ್ರ ಮೋದಿಗೆ ಫಿಜಿ ದೇಶದ ಅತ್ಯುನ್ನತ ಗೌರವವಾದ ‘ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಫಿಜಿ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಜಾಗತಿಕ ನಾಯಕತ್ವಕ್ಕಾಗಿ ಪ್ರಧಾನಿ ಮೋದಿಯವರಿಗೆ ಈ ಗೌರವ ಸಿಕ್ಕಿದ್ದು, ಫಿಜಿ ಪ್ರದಾನಿ ಸಿಟಿವೆನಿ ರಬುಕಾ ಪ್ರಶಸ್ತಿ ನೀಡಿ ಸನ್ಮಾನಿಸಿದ್ದಾರೆ. ಫಿಜಿ ದೇಶದವರಲ್ಲದವರು ಪ್ರಶಸ್ತಿ ಸ್ವೀಕರಿಸಿರುವುದು ಇದೇ ಮೊದಲು.
ಇದೇ ವೇಳೆ, ಮಾತನಾಡಿದ ಪ್ರಧಾನಿ ಮೋದಿ, ‘ಇದು ನನಗೊಬ್ಬನಿಗೆ ಸಿಕ್ಕ ಗೌರವವಲ್ಲ. ದೇಶದ 140 ಕೋಟಿ ಜನರು, ಶತಶತಮಾನಗಳಷ್ಟು ಹಳೆಯ ಭಾರತ–ಫಿಜಿ ಸಂಬಂಧಕ್ಕೆ ಸಿಕ್ಕ ಗೌರವವಾಗಿದೆ’ ಎಂದು ಮೋದಿ ಹೇಳಿದ್ದಾರೆ.
ದ್ವಿಪಕ್ಷೀಯ ಬಾಂಧವ್ಯವನ್ನು ಹೆಚ್ಚಿಸಲು ಭಾರತ ಮತ್ತು 14 ಪೆಸಿಫಿಕ್ ದ್ವೀಪ ರಾಷ್ಟ್ರಗಳ ನಡುವಿನ ಪ್ರಮುಖ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ, ಚೊಚ್ಚಲ ಭೇಟಿಯಲ್ಲಿ ಭಾನುವಾರ ಪಪುವಾ ನ್ಯೂಗಿನಿಗೆ ತಲುಪಿದ್ದರು.
‘ಇದು ಭಾರತಕ್ಕೆ ದೊಡ್ಡ ಗೌರವ. ಪ್ರಧಾನಿ ಮೋದಿಯವರಿಗೆ ಫಿಜಿಯ ಪ್ರಧಾನ ಮಂತ್ರಿ ಅತ್ಯುನ್ನತ ಪ್ರಶಸ್ತಿಯನ್ನು ನೀಡಿದರು. ಅವರ ಜಾಗತಿಕ ನಾಯಕತ್ವವನ್ನು ಗುರುತಿಸಿ ‘ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಫಿಜಿ’ ಗೌರವ ನೀಡಲಾಗಿದೆ. ಬೆರಳೆಣಿಕೆಯಷ್ಟು ಮಂದಿ ಫಿಜಿಯೇತರರು ಮಾತ್ರ ಈ ಗೌರವವನ್ನು ಪಡೆದಿದ್ದಾರೆ’ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.