ADVERTISEMENT

ರಷ್ಯಾ–ಉಕ್ರೇನ್ ಸಂಘರ್ಷದಲ್ಲಿ ಯಾರೂ ಗೆಲ್ಲುವುದಿಲ್ಲ: ಜರ್ಮನಿಯಲ್ಲಿ ಪ್ರಧಾನಿ ಮೋದಿ

ಪಿಟಿಐ
Published 2 ಮೇ 2022, 15:40 IST
Last Updated 2 ಮೇ 2022, 15:40 IST
ಧಾನಿ ನರೇಂದ್ರ ಮೋದಿ ಹಾಗೂ ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ – ಪಿಟಿಐ ಚಿತ್ರ
ಧಾನಿ ನರೇಂದ್ರ ಮೋದಿ ಹಾಗೂ ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ – ಪಿಟಿಐ ಚಿತ್ರ   

ಬರ್ಲಿನ್: ‘ರಷ್ಯಾ–ಉಕ್ರೇನ್ ಸಂಘರ್ಷದಲ್ಲಿ ಯಾರೂ ಗೆಲ್ಲುವುದಿಲ್ಲ. ಎಲ್ಲರೂ ನಷ್ಟ ಅನುಭವಿಸುತ್ತಾರೆ ಎಂಬುದಾಗಿ ಭಾರತ ಭಾವಿಸುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಜತೆ ಜಂಟಿ ಪತ್ರಿಕಾ ಹೇಳಿಕೆ ನೀಡಿದ ಅವರು, ಯುದ್ಧವನ್ನು ಸ್ಥಗಿತಗೊಳಿಸುವಂತೆ ಉಕ್ರೇನ್ ಬಿಕ್ಕಟ್ಟಿನ ಆರಂಭದಲ್ಲೇ ಭಾರತ ಹೇಳಿತ್ತು. ವಿವಾದ ಪರಿಹಾರಕ್ಕೆ ಮಾತುಕತೆಯೊಂದೇ ಪರಿಹಾರ ಎಂದು ಹೇಳಿತ್ತು ಎಂದರು.

‘ಯುದ್ಧದಲ್ಲಿ ಯಾರೂ ಗೆಲ್ಲುವುದಿಲ್ಲ. ಎಲ್ಲರೂ ನಷ್ಟ ಅನುಭವಿಸುತ್ತಾರೆ ಎಂಬುದಾಗಿ ನಾವು ಭಾವಿಸುತ್ತೇವೆ. ನಾವು ಶಾಂತಿಯ ಪರ’ ಎಂದು ಅವರು ಹೇಳಿದರು.

‘ಉಕ್ರೇನ್ ಬಿಕ್ಕಟ್ಟಿನಿಂದಾಗಿ ಉಂಟಾಗಿರುವ ಅಡಚಣೆಯಿಂದ ತೈಲ ಬೆಲೆ ಗಗನಕ್ಕೇರಿದೆ. ಆಹಾರ ಧಾನ್ಯ ಹಾಗೂ ರಸಗೊಬ್ಬರ ಕೊರತೆಯಾಗಿದೆ. ಪರಿಣಾಮವಾಗಿ ವಿಶ್ವದ ಪ್ರತಿಯೊಂದು ಕುಟುಂಬವೂ ಸಮಸ್ಯೆ ಎದುರಿಸುತ್ತಿದೆ’ ಎಂದು ಮೋದಿ ಹೇಳಿದರು.

ಅಭಿವೃದ್ಧಿ ಹೊಂದುತ್ತಿರುವ ಮತ್ತು ಬಡ ರಾಷ್ಟ್ರಗಳ ಮೇಲೆ ಯುದ್ಧದ ಪರಿಣಾಮ ಮತ್ತಷ್ಟು ಹೆಚ್ಚು ಎಂದು ಅವರು ಅಭಿಪ್ರಾಯಪಟ್ಟರು.

ಉಕ್ರೇನ್ ಮೇಲೆ ದಾಳಿ ನಡೆಸುವ ಮೂಲಕ ರಷ್ಯಾವು ವಿಶ್ವಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಓಲಾಫ್ ಸ್ಕೋಲ್ಜ್ ಹೇಳಿದರು.

ಜರ್ಮನಿಯಲ್ಲಿ ನಡೆಯಲಿರುವ ಜಿ–7 ಶೃಂಗಸಭೆಗೆ ಮೋದಿ ಅವರನ್ನು ಆಹ್ವಾನಿಸಿರುವುದಾಗಿಯೂ ಅವರು ಮಾಹಿತಿ ನೀಡಿದರು.

ಜರ್ಮನಿ, ಡೆನ್ಮಾರ್ಕ್‌ ಮತ್ತು ಫ್ರಾನ್ಸ್‌ಗೆ ಪ್ರವಾಸ ಕೈಗೊಂಡಿರುವ ಮೋದಿ ಅವರು ಸೋಮವಾರ ಬೆಳಿಗ್ಗೆ ಬರ್ಲಿನ್ ತಲುಪಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.