ವಾಸಾ: ಉಕ್ರೇನ್ ಭೇಟಿಗೂ ಒಂದು ದಿನ ಮುನ್ನ ಪೋಲೆಂಡ್‌ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ‘ಭಾರತ ಶಾಂತಿಯನ್ನು ಬೆಂಬಲಿಸುತ್ತದೆ. ರಾಜತಾಂತ್ರಿಕತೆ ಮತ್ತು ಮಾತುಕತೆಯ ಮೂಲಕ ಯಾವುದೇ ಸಂಘರ್ಷವನ್ನು ಪರಿಹರಿಸಬಹುದು. ಇದು ಯುದ್ಧದ ಯುಗವಲ್ಲ’ ಎಂದು ಹೇಳಿದರು.
ವಾಸಾದಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಎಲ್ಲಾ ದೇಶಗಳಿಂದ ಅಂತರಕಾಯ್ದುಕೊಳ್ಳಬೇಕು ಎನ್ನುವುದು ಭಾರತ ದಶಕಗಳಿಂದ ಪಾಲಿಸಿಕೊಂಡು ಬಂದ ನೀತಿ. ಆದರೆ ಎಲ್ಲಾ ದೇಶಗಳಿಗೆ ಹತ್ತಿರವಾಗುವುದು ಇಂದಿನ ಭಾರತದ ನೀತಿ’ ಎಂದು ಹೇಳಿದರು. ಈ ವೇಳೆ ನೆರೆದ ಜನಸಮೂಹ ಮೋದಿ, ಮೋದಿ ಎಂದು ಘೋಷಣೆಗಳನ್ನು ಕೂಗಿದರು.
‘ಭಾರತವು ಭಗವಾನ್ ಬುದ್ಧನ ಪರಂಪರೆಯ ಭೂಮಿಯಾಗಿದೆ. ಈ ಪ್ರದೇಶದಲ್ಲಿ ಶಾಂತಿಯನ್ನು ಬಯಸುತ್ತದೆ. ಸಂಘರ್ಷವನ್ನು ಪರಿಹರಿಸಿ ಶಾಂತಿ ಸ್ಥಾಪನೆಗೆ ಮಾತುಕತೆ ಮತ್ತು ರಾಜತಾಂತ್ರಿಕತೆಯೇ ಉತ್ತಮ ಮಾರ್ಗ ಎಂದು ಭಾರತ ನಂಬುತ್ತದೆ’ ಎಂದರು.
‘ಇಂದಿನ ಭಾರತವು ಎಲ್ಲರೊಂದಿಗೆ ಸಂಪರ್ಕ ಹೊಂದಲು ಬಯಸುತ್ತದೆ. ಎಲ್ಲರ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತದೆ ಜತೆಗೆ ಎಲ್ಲರೊಂದಿಗಿದ್ದು, ಹಿತಾಸಕ್ತಿಗಳ ಕುರಿತು ಆಲೋಚಿಸುತ್ತದೆ’ ಎಂದು ಪ್ರತಿಪಾದಿಸಿದರು.
ಎರಡು ದಶಕಗಳ ಹಿಂದೆ ಗುಜರಾತ್‌ನಲ್ಲಿ ಭೂಕಂಪ ಸಂಭವಿಸಿದಾಗ ನೆರವು ನೀಡಿದ ಮೊದಲ ರಾಷ್ಟ್ರಗಳಲ್ಲಿ ಪೋಲೆಂಡ್ ಕೂಡ ಒಂದು ಎಂದು ಮೋದಿ ನೆನಪಿಸಿಕೊಂಡರು.
ಈ ಭೇಟಿಯ ಮೂಲಕ, ಭಾರತವು ವಾರ್ಷಿಕವಾಗಿ 20 ಪೋಲೆಂಡ್ ಯುವಕರನ್ನು ಭಾರತಕ್ಕೆ ಬರುವಂತೆ ಆಹ್ವಾನಿಸುತ್ತಿದ್ದೇವೆ ಎಂದರು
ಮೋದಿ ಅವರು ನಾಳೆ (ಆ.23) ಉಕ್ರೇನ್ ರಾಜಧಾನಿ ಕೀವ್‌ಗೆ ಭೇಟಿ ನೀಡಲಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಆಹ್ವಾನದ ಮೇರೆಗೆ ಉಕ್ರೇನ್‌ಗೆ ಭೇಟಿ ನೀಡುತ್ತಿರುವ ಮೋದಿ, ನಡೆಯುತ್ತಿರುವ ಸಂಘರ್ಷದ ಶಾಂತಿಯುತ ಪರಿಹಾರದ ಕುರಿತು ಮಾತುಕತೆ ನಡೆಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.