ವಾಸಾ (ಪೋಲೆಂಡ್): ಉಕ್ರೇನ್ ಹಾಗೂ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ 'ತೀವ್ರ ಕಳವಳ' ವ್ಯಕ್ತಪಡಿಸಿದ್ದಾರೆ. ಯಾವುದೇ ಸಮಸ್ಯೆಗಳಿಗೆ ಕದನ ಕಣದಲ್ಲಿ ಪರಿಹಾರ ಸಿಗಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಪೋಲೆಂಡ್ ಪ್ರವಾಸದಲ್ಲಿರುವ ಮೋದಿ, ಅಲ್ಲಿನ ಪ್ರಧಾನಿ ಡೊನಾಲ್ಡ್ ಟಸ್ಕ್ ಅವರೊಂದಿಗೆ ಸಭೆ ನಡೆಸಿದ ಬಳಿಕ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
'ಉಕ್ರೇನ್ ಮತ್ತು ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವು ನಮ್ಮೆಲ್ಲರಿಗೂ ಅತ್ಯಂತ ಕಳವಳದ ಸಂಗತಿಯಾಗಿದೆ. ಕದನ ಕಣದಲ್ಲಿ ಯಾವುದೇ ಸಮಸ್ಯೆಗಳು ಪರಿಹಾರವಾಗುವುದಿಲ್ಲ ಎಂಬುದನ್ನು ಭಾರತ ಬಲವಾಗಿ ನಂಬಿದೆ' ಎಂದು ಹೇಳಿದ್ದಾರೆ.
'ಸ್ಥಿರತೆ ಮತ್ತು ಶಾಂತಿ ಸ್ಥಾಪನೆಗಾಗಿ ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳನ್ನು ನಾವು ಬೆಂಬಲಿಸುತ್ತೇವೆ. ಅದಕ್ಕಾಗಿ ಸಾಧ್ಯವಿರುವ ನೆರವನ್ನು ನೀಡಲು ಭಾರತವು ತನ್ನ ಮಿತ್ರ ರಾಷ್ಟ್ರಗಳೊಂದಿಗೆ ಸಿದ್ಧವಿದೆ' ಎಂದು ಭರವಸೆ ನೀಡಿದ್ದಾರೆ.
ಭಾರತ ಮತ್ತು ಪೋಲೆಂಡ್ ಬಾಂಧವ್ಯ ವೃದ್ಧಿ ನಿಟ್ಟಿನಲ್ಲಿ ಮಾಡಿದ ಪ್ರಯತ್ನಗಳಿಗಾಗಿ ಹಾಗೂ ಉಕ್ರೇನ್‌ನಲ್ಲಿ ಯುದ್ಧ ಆರಂಭವಾದಾಗ ಭಾರತದ ವಿದ್ಯಾರ್ಥಿಗಳನ್ನು ವಾಪಸ್ ಕರೆಸಿಕೊಳ್ಳಲು ನೆರವಾದುದ್ದಕ್ಕೆ ಟಸ್ಕ್ ಅವರಿಗೆ ಧನ್ಯವಾದ ಹೇಳಿದ ಮೋದಿ, ಅವರ ಪ್ರಯತ್ನಗಳು 'ಶ್ಲಾಘನಾರ್ಹವಾದವು' ಎಂದಿದ್ದಾರೆ.
ಮೋದಿ ಅವರು ಯುದ್ಧಪೀಡಿತ ಉಕ್ರೇನ್‌ಗೆ ಇಂದು ರಾತ್ರಿ ಪ್ರಯಾಣಿಸಲಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಮೋದಿಗೆ ಆಹ್ವಾನ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.