ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಫೆ. 13ರಂದು ಎರಡು ದಿನಗಳ ಯುಎಇ ಪ್ರವಾಸ ಕೈಗೊಳ್ಳಲಿದ್ದು, ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಮೋದಿಯವರು ಪ್ರಧಾನಿಯಾದ ಬಳಿಕ ಏಳನೇ ಬಾರಿಗೆ ಯುಎಇಗೆ ಭೇಟಿ ನೀಡುತ್ತಿದ್ದಾರೆ. ಕಳೆದ ಎಂಟು ತಿಂಗಳಲ್ಲಿ ಅವರು ಕೈಗೊಳ್ಳುತ್ತಿರುವ ಮೂರನೇ ಭೇಟಿ ಇದಾಗಿದೆ.
ಈ ಭೇಟಿಯ ವೇಳೆ ಯುಎಇ ಅಧ್ಯಕ್ಷ ಶೇಖ್ ಮೊಹಮದ್ ಬಿನ್ ಜಯೇದ್ ಅಲ್ ನಹ್ಯಾನ್ ಅವರೊಂದಿಗೆ ಮೋದಿ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದು, ವ್ಯಾಪಾರ –ವ್ಯವಹಾರ ಸೇರಿದಂತೆ ಸಹಭಾಗಿತ್ವದ ಕುರಿತು ಉಭಯ ನಾಯಕರು ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಳಿಕ ಮೋದಿ ಅವರು ಯುಎಇ ಉಪಾಧ್ಯಕ್ಷ, ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅವರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.
ಯುಎಇ ಸರ್ಕಾರದ ಆಹ್ವಾನದ ಮೇರೆಗೆ ದುಬೈನಲ್ಲಿ ನಡೆಯಲಿರುವ ವಿಶ್ವ ಸರ್ಕಾರಿ ಶೃಂಗಸಭೆ 2024ರಲ್ಲಿ ಮೋದಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಭಾಷಣ ಮಾಡಲಿದ್ದಾರೆ.
ಫೆ.14ರಂದು ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯವಾದ ಶ್ರೀಸ್ವಾಮಿನಾರಾಯಣ ಮಂದಿರವನ್ನು ಮೋದಿ ಉದ್ಘಾಟಿಸಲಿದ್ದಾರೆ. ಬಳಿಕ ಝಾಯೆದ್ ಸ್ಫೋರ್ಟ್ಸ್ ಸಿಟಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.