ಜೋಹಾನಸ್‌ಬರ್ಗ್: ದಕ್ಷಿಣ ಆಫ್ರಿಕಾದ ಜೋಹಾನಸ್‌ಬರ್ಗ್‌ನಲ್ಲಿ ನಡೆದ 15 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಗ್ರೀಸ್ ದೇಶಕ್ಕೆ ಪ್ರಯಾಣ ಆರಂಭಿಸಿದ್ದಾರೆ.
ದಕ್ಷಿಣಾ ಆಫ್ರಿಕಾ ಭೇಟಿಯ ವೇಳೆ ಇತರ ದೇಶಗಳೊಂದಿಗೆ ಭಾರತದ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಲು ವಿಶ್ವದ ಹಲವು ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು.
ಕೋವಿಡ್ -19 ಕಾರಣದಿಂದ ಸತತ ಮೂರು ವರ್ಷಗಳ ವರ್ಚುವಲ್ ಸಭೆ ನಂತರ ಮೋದಿ ಅವರು ಮಂಗಳವಾರ ಬ್ರಿಕ್ಸ್ ಶೃಂಗಸಭೆಗಾಗಿ ದಕ್ಷಿಣ ಆಫ್ರಿಕಾಕ್ಕೆ ಆಗಮಿಸಿದ್ದರು.
ಈ ಬಗ್ಗೆ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗಾಚಿ ‘ದಕ್ಷಿಣಾ ಆಫ್ರಿಕಾ ಭೇಟಿ ಮುಗಿಸಿ ಪ್ರಧಾನಿ ಅವರು ಗ್ರೀಸ್‌ಗೆ ಪ್ರಯಾಣ ಬೆಳೆಸಿದ್ದಾರೆ’ ಎಂದು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
40 ವರ್ಷಗಳ ಬಳಿಕ ಭಾರತದ ಪ್ರಧಾನಿಯ ಭೇಟಿ
ಗ್ರೀಕ್ ಪ್ರಧಾನಿ ಕಿರಿಯಾಕೋಸ್ ಮಿಟ್ಸೋಟಾಕಿಸ್ ಅವರ ಆಹ್ವಾನದ ಮೇರೆಗೆ ಮೋದಿ ಅವರು ಶುಕ್ರವಾರ ರಾಜಧಾನಿ ಅಥೆನ್ಸ್‌ಗೆ ತೆರಳಿದ್ದಾರೆ.
1983ರಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿ ಅವರು ಗ್ರೀಸ್ ದೇಶಕ್ಕೆ ಭೇಟಿ ನೀಡಿದ್ದರು. ಇದೀಗ 40 ವರ್ಷಗಳ ಬಳಿಕ ಪ್ರಧಾನಿ ಮೋದಿ ತೆರಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ಅಥೆನ್ಸ್‌ನಲ್ಲಿರುವ ಬಾಲಿವುಡ್ ಡ್ಯಾನ್ಸ್ ಅಕಾಡೆಮಿಯ ಗ್ರೀಕ್ ವಿದ್ಯಾರ್ಥಿಗಳು ಸಿದ್ಧತೆ ನಡೆಸಿದ್ದಾರೆ.
ಆಸ್ಕರ್ ಪ್ರಶಸ್ತಿ ವಿಜೇತ ‘ನಾಟು ನಾಟು’ ಹಾಡಿಗೆ ವಿದ್ಯಾರ್ಥಿಗಳು ನೃತ್ಯ ಮಾಡಲು ಸಿದ್ಧತೆ ನಡೆಸಿಕೊಂಡಿರುವುದಾಗಿ ಖುಷಿ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.