ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಮೈತ್ರಿ ಸರ್ಕಾರವನ್ನು ರಚಿಸುವ ಕುರಿತು ಪಾಕಿಸ್ತಾನ್ ಮುಸ್ಲಿಂ ಲೀಗ್ –ನವಾಜ್ (ಪಿಎಂಎಲ್–ಎನ್) ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ನಡುವೆ ಶುಕ್ರವಾರ ಎರಡನೇ ಸುತ್ತಿನ ಮಾತುಕತೆ ನಡೆಯುವ ನಿರೀಕ್ಷೆಯಿದೆ.
ಸರ್ಕಾರ ರಚನೆಯ ಕಸರತ್ತು ಮುಂದುವರಿದಿರುವಂತೆಯೇ, 2ನೇ ಸುತ್ತಿನ ಚರ್ಚೆ ಕುರಿತು ಸ್ಥಳೀಯ ದೈನಿಕ ‘ಡಾನ್’ ಈ ಕುರಿತು ವರದಿ ಮಾಡಿದೆ. ಬಿಲಾವಲ್ ಭುಟ್ಟೊ–ಜರ್ದಾರಿ ನೇತೃತ್ವದ ಪಿಪಿಪಿ ಈಗಾಗಲೇ ಸರ್ಕಾರ ರಚನೆಗೆ ಪಿಎಂಲ್–ಎನ್ ಬೆಂಬಲಿಸುವುದಾಗಿ ಹೇಳಿದೆ.
‘ಪ್ರಧಾನಿ ಆಯ್ಕೆ ಹಾಗೂ ಸರ್ಕಾರ ರಚನೆಗೆ ಪಕ್ಷ ಬೆಂಬಲ ನೀಡಲಿದೆ. ಪ್ರತಿಯಾಗಿ ಅಧ್ಯಕ್ಷ ಸ್ಥಾನ ಒಳಗೊಂಡಂತೆ ಪ್ರಮುಖ ಸಾಂವಿಧಾನಿಕ ಸ್ಥಾನಗಳ ಆಯ್ಕೆಗೆ ಬೆಂಬಲ ನೀಡಬೇಕು’ ಎಂದು ಪಿಪಿಪಿ ಮುಖಂಡರು ಪಿಎಂಎಲ್–ಎನ್ ಮುಖಂಡರಿಗೆ ಷರತ್ತು ಹಾಕಿದ್ದಾರೆ.
ಇದೇ ಹಿನ್ನೆಲೆಯಲ್ಲಿ ಉಭಯ ಪಕ್ಷಗಳ ಮುಖಂಡರ ನಡುವೆ ಶುಕ್ರವಾರ ಮತ್ತೊಂದು ಸುತ್ತಿನ ಚರ್ಚೆ ನಡೆಯಲಿದೆ. ಅಧಿಕಾರ ಹಂಚಿಕೆ ಸೂತ್ರ ಕುರಿತು ಸ್ಪಷ್ಟ ಚಿತ್ರಣ ಮೂಡಬಹುದು ಎಂದು ವರದಿ ಉಲ್ಲೇಖಿಸಿದೆ.
ಮೂಲಗಳ ಪ್ರಕಾರ, ಮಾಜಿ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಅವರು ಸಂಸತ್ತಿನ ಸ್ಪೀಕರ್ ಆಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಈ ಮಧ್ಯೆ, ವಿರೋಧಪಕ್ಷದ ಮಾಜಿ ನಾಯಕ ಖುರ್ಷೀದ್ ಶಾ ಅವರ ಹೆಸರು ಕೂಡ ಈ ಸ್ಥಾನಕ್ಕೆ ಕೇಳಿಬರುತ್ತಿದೆ. ಇನ್ನೊಂದೆಡೆ, ಸ್ಪೀಕರ್ ಸ್ಥಾನಕ್ಕೆ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಸ್ಪೀಕರ್ ಅಯಾಜ್ ಸಾದಿಕ್ ಅವರ ಹೆಸರನ್ನು ಪಿಎಂಎಲ್–ಎನ್ ಉಲ್ಲೇಖಿಸಿದೆ ಎನ್ನಲಾಗಿದ್ದು, ಅಂತಿಮ ತೀರ್ಮಾನವಾಗಿಲ್ಲ.
‘ಇಮ್ರಾನ್ ಸರ್ಕಾರದ ಪದಚ್ಯುತಿಗೆ ಸೇನೆ ಕಾರಣ’
ಇಸ್ಲಾಮಾಬಾದ್ : ‘ಇಮ್ರಾನ್ ಖಾನ್ ನೇತೃತ್ವದ ಸರ್ಕಾರವನ್ನು 2022ರಲ್ಲಿ ಪದಚ್ಯುತಗೊಳಿಸುವಲ್ಲಿ ಸೇನೆಯ ಉನ್ನತ ನಾಯಕರ ಪಾತ್ರವಿದೆ’ ಎಂದು ಜಮೈತ್ ಉಲೇಮಾ–ಇ–ಇಸ್ಲಾಂ ಫಜ್ಲ್ (ಜೆಯುಐ–ಎಫ್) ನಾಯಕ ಮೌಲಾನಾ ಫಜ್ಲುರ್ ರೆಹಮಾನ್ ಆರೋಪಿಸಿದ್ದಾರೆ.
ಸಾಮ್ನಾ ಟಿ.ವಿ. ವಾಹಿನಿಯ ಸಂವಾದದಲ್ಲಿ ಮಾತನಾಡಿದ ಅವರು, ಸೇನೆಯ ಮಾಜಿ ಮುಖ್ಯಸ್ಥ ಜನರಲ್ (ನಿವೃತ್ತ) ಖಮರ್ ಜಾವೇದ್ ಬಾಜ್ವಾ ಅವರು ತೆಹ್ರೀಕ್–ಇ–ಇನ್ಸಾಫ್ (ಪಿಟಿಐ) ಸರ್ಕಾರದ ಪತನಕ್ಕೆ ಕಾರಣರಾದರು ಎಂದು ಹೇಳಿದರು.
‘ಇಮ್ರಾನ್ ಖಾನ್ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯವನ್ನು ಉಲ್ಲೇಖಿಸಿ, ‘ಪಿಪಿಪಿ ನಿರ್ಣಯ ಮಂಡಿಸಿತ್ತು. ಆಗ ಜನರಲ್ ಬಾಜ್ವಾ ಮತ್ತು ಫಯಾಜ್ ಹಮದ್ ಅವರು ನಮ್ಮ ಜೊತೆ ಸಂಪರ್ಕದಲ್ಲಿದ್ದರು. ನಿರ್ಣಯ ಮಂಡಿಸುವಂತೆ ಅವರು ಎಲ್ಲ ಪಕ್ಷಗಳಿಗೆ ಸೂಚಿಸಿದ್ದರು’ ಎಂದು ಹೇಳಿದರು.
ಬೆಳವಣಿಗೆ ಗಮನಿಸುತ್ತಿದ್ದೇವೆ –ಅಮೆರಿಕ
ವಾಷಿಂಗ್ಟನ್ : ಪಾಕಿಸ್ತಾನದ ಚುನಾವಣಾ ಪ್ರಕ್ರಿಯೆ ಮತ್ತು ಸರ್ಕಾರ ರಚನೆ ಯತ್ನ ಕುರಿತ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸ ಲಾಗುತ್ತಿದೆ ಎಂದು ಅಮೆರಿಕ ತಿಳಿಸಿದೆ. ಪಾಕ್‌ನಲ್ಲಿ ಮತದಾರರನ್ನು ಹತ್ತಿಕ್ಕುವ ಯತ್ನ ನಡೆದಿದೆ ಎಂಬ ವರದಿ ಕುರಿತು ಕಳವಳ ವ್ಯಕ್ತಪಡಿಸಿದೆ.
ಶ್ವೇತಭವನದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ರಾಷ್ಟ್ರೀಯ ಭದ್ರತಾ ಮಂಡಳಿಯ ಸಂಯೋಜಕ ಜಾನ್ ಕಿರ್ಬಿ ಅವರು, ನಾನು ಅರ್ಥ ಮಾಡಿಕೊಂಡಂತೆ ಸರ್ಕಾರ ರಚನೆಗೆ ಇನ್ನೂ ಯತ್ನ ನಡೆಯುತ್ತಿದೆ. ಅಂತರರಾಷ್ಟ್ರೀಯವಾಗಿಯೂ ಚರ್ಚೆ ನಡೆದಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.