ಕೇಪ್ ಕ್ಯಾನವೆರೆಲ್: ‘ಸ್ಪೇಸ್‌ಎಕ್ಸ್’ ಸಂಸ್ಥೆಯ ಸಹಯೋಗದೊಂದಿಗೆ ಇತ್ತೀಚೆಗೆ ಬಾಹ್ಯಾಕಾಶಕ್ಕೆ ಹೋಗಿದ್ದ ನಾಲ್ವರು ಗಗನಯಾತ್ರಿಗಳು ಸುರಕ್ಷಿತವಾಗಿ ಭಾನುವಾರ ಸಂಜೆ ಭೂಮಿಗೆ ಬಂದಿಳಿದಿದ್ದಾರೆ.
ಇದು ಪ್ರಪಂಚದ ಮೊದಲ ಖಾಸಗಿ ಬಾಹ್ಯಾಕಾಶ ನಡಿಗೆ ಕಾರ್ಯಕ್ರಮವಾಗಿತ್ತು. ಇದರಲ್ಲಿ ಇಬ್ಬರು ನಾಸಾ ಪೈಲಟ್‌ಗಳು ಸೇರಿ ಒಬ್ಬ ಸ್ಪೇಸ್ ಎಕ್ಸ್ ಉದ್ಯೋಗಿ ಹಾಗೂ ಬಿಲಿಯನೇರ್ ಜರೆಡ್ ಐಸಾಕ್‌ಮನ್ ಇದ್ದರು.
ಇವರನ್ನು ಹೊತ್ತಿದ್ದ ನೌಕೆ ಭಾನುವಾರ ಸಂಜೆ ಮೆಕ್ಸಿಕೊ ಕೊಲ್ಲಿಯಲ್ಲಿ ಯಶಸ್ವಿಯಾಗಿ ಇಳಿಯಿತು. ಬಿಲಿಯನೇರ್ ಜೇರೆಡ್ ಐಸಾಕ್‌ಮನ್ ಅವರು ಬಾಹ್ಯಾಕಾಶ ನಡಿಗೆ ನಡೆಸಿದ ಮೊದಲ ಖಾಸಗಿ ವ್ಯಕ್ತಿಯಾಗಿದ್ದಾರೆ.
ಈ ಮೂಲಕ ಇದೇ ಮೊದಲ ಬಾರಿಗೆ ಖಾಸಗಿಯಾಗಿ ಆಯೋಜಿಸಲಾಗಿದ್ದ ‘ವಿಶ್ವದ ಮೊದಲ ಬಾಹ್ಯಾಕಾಶ ನಡಿಗೆ’ಯು ಯಶಸ್ವಿಯಾದಂತಾಯಿತು.
ಸಾಮಾನ್ಯವಾಗಿ ತರಬೇತಿ ಹೊಂದಿದ ಗಗನಯಾತ್ರಿಗಳನ್ನು ಮಾತ್ರವೇ ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ. ಆದರೆ ಅವರ ಹೊರತಾಗಿ ಸಾಮಾನ್ಯರೂ ಬಾಹ್ಯಾಕಾಶಕ್ಕೆ ಹೋಗಿ ಇವರು ಅಪರೂಪದ ಸಾಧನೆ ಮಾಡಿದ್ದಾರೆ.
ಸ್ಪೇಸ್‌ಎಕ್ಸ್ ಆಯೋಜಿಸಿದ್ದ ಈ ‘ಬಾಹ್ಯಾಕಾಶ ನಡಿಗೆ’ ಯೋಜನೆಯಲ್ಲಿ ಅದರ ಸಿಬ್ಬಂದಿ ಸೇರಿ ನಾಲ್ವರು ಗಗನನೌಕೆಯಲ್ಲಿ ಬಾಹ್ಯಾಕಾಶ ತಲುಪಿದರು. ಭೂಮಿಯಿಂದ ಸುಮಾರು 740 ಕಿ.ಮೀ. ದೂರದ ಕಕ್ಷೆಯಲ್ಲಿ ‘ಬಾಹ್ಯಾಕಾಶ ನಡಿಗೆ’ ಯಶಸ್ವಿಯಾಗಿ ನಡೆಯಿತು.
‘ಬಾಹ್ಯಾಕಾಶ ನಡಿಗೆ’ಗೆಂದು ಗುರುತಿಸಲಾಗಿದ್ದ ಅನುಕೂಲಕರ ಸ್ಥಳದಲ್ಲಿ ನೌಕೆಯು ನಿಂತ ಬಳಿಕ, ಅದರಿಂದ ಹೊರಬಂದ ಐಸಾಕ್‌ಮನ್ ‘ಬಾಹ್ಯಾಕಾಶ ನಡಿಗೆ’ಯನ್ನು ಸಂಭ್ರಮಿಸಿದ್ದರು.
ನಲವತ್ತೊಂದು ವರ್ಷದ ಐಸಾಕ್‌ಮನ್ ಅವರು ‘ಶಿಫ್ಟ್4’ ಎಂಬ ಕ್ರೆಡಿಟ್ ಕಾರ್ಡ್ ಪ್ರೊಸೆಸಿಂಗ್ ಸಂಸ್ಥೆಯ ಸಂಸ್ಥಾಪಕರು ಹಾಗೂ ಸಿಇಒ. ಈವರೆಗೆ 12 ದೇಶಗಳ ಸುಮಾರು 263 ಜನರು ‘ಬಾಹ್ಯಾಕಾಶ ನಡಿಗೆ’ಯಲ್ಲಿ ಪಾಲ್ಗೊಂಡಿದ್ದಾರೆ. 1965ರಲ್ಲಿ ರಷ್ಯಾದ ಅಲೆಕ್ಸಿ ಲಿಯೋನೊವ್ ಅವರು ಮೊದಲ ಬಾರಿಗೆ ‘ಬಾಹ್ಯಾಕಾಶ ನಡಿಗೆ’ಯನ್ನು ಕೈಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.