ಲಂಡನ್ (ಎಪಿ): ‘ಅಸಭ್ಯವಾಗಿ ಪೋಸ್ ನೀಡಲು ಬಾಲಕನೊಬ್ಬನಿಗೆ ಬಿಬಿಸಿ ಸುದ್ದಿಸಂಸ್ಥೆಯ ನಿರೂಪಕರೊಬ್ಬರು ಹಣ ನೀಡಿದ್ದರು ಎಂಬ ಆರೋಪದ ಪ್ರಕರಣದ ಸಂಬಂಧ ಅಗತ್ಯ ಸಾಕ್ಷ್ಯಗಳು ಇಲ್ಲ’ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಈ ಮಧ್ಯೆ, ಹಣ ನೀಡಿದ್ದ ಆರೋಪಕ್ಕೆ ಗುರಿಯಾಗಿದ್ದು ನಿರೂಪಕ ಹೂ ಎಡ್ವರ್ಡ್ ಎಂದು ಆತನ ಪತ್ನಿಯೇ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದಾರೆ.
ಸಂತ್ರಸ್ತ ಬಾಲಕ ಮತ್ತು ಆತನ ಪೋಷಕರ ಜೊತೆಗೆ ಚರ್ಚಿಸಿದ ಬಳಿಕ ಪ್ರಕರಣ ಕುರಿತು ಮುಂದಿನ ಕ್ರಮವನ್ನು ಕೈಬಿಡಲು ಪೊಲೀಸರು ನಿರ್ಧರಿಸಿದರು. ‘ನಿರೂಪಕರು ಬಾಲಕನಿಗೆ ಹಣ ನೀಡಿದ್ದರು’ ಎಂದು ಬಾಲಕನ ಪೋಷಕರು ಸನ್ ದಿನಪತ್ರಿಕೆಗೆ ಕಳೆದ ವಾರ ತಿಳಿಸಿದ್ದರು.
ಈ ಸುದ್ದಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಬಿಬಿಸಿ ಸುದ್ದಿಸಂಸ್ಥೆಯೂ ಇರಿಸುಮುರಿಸಿಗೆ ಒಳಗಾಗಿತ್ತು. ನಂತರ ಆರೋಪಕ್ಕೆ ಸಂಬಂಧಸಿದಂತೆ ನಿರೂಪಕನನ್ನು ಅಮಾನತುಪಡಿಸಲಾಗಿದೆ ಎಂದು ಸಂಸ್ಥೆ ಪ್ರಕಟಿಸಿತ್ತು.
ನಿರೂಪಕ ಎಡ್ವರ್ಡ್ ಅವರ ಪತ್ನಿ ವಿಕಿ ಫ್ಲಿಂಡ್ ಅವರು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದು, ಗಂಭೀರವಾದ ಮಾನಸಿಕ ಸಮಸ್ಯೆಯಿಂದ ನನ್ನ ಪತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದು, ನನ್ನ ಕುಟುಂಬಕ್ಕೆ ಸಂಕಷ್ಟದ ಕಾಲವಾಗಿದೆ ಎಂದು ಹೇಳಿಕೊಂಡಿದ್ದರು.
ಪ್ರಕರಣ ಸಂಬಂಧ ಮುಂದೆ ಯಾವುದೇ ಕ್ರಮ ಇರುವುದಿಲ್ಲ ಎಂದು ಮೆಟ್ರೊಪಾಲಿಟನ್ ಪೊಲೀಸ್ ಇಲಾಖೆಯು ಹೇಳಿಕೆ ನೀಡಿದೆ. ಆದರೆ, ತನಿಖೆ ಮುಂದುವರಿಸಲಾಗುವುದು ಎಂದು ಬಿಬಿಸಿ ಸುದ್ದಿಸಂಸ್ಥೆಯು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.